ದೇಶ

ನಾಲ್ಕನೇ ಹಂತದ ಮತದಾನ: ಸಂಜೆ 7 ಗಂಟೆ ವೇಳೆಗೆ ಶೇ. 62 ರಷ್ಟು ಮತದಾನ

Nagaraja AB

ನವದೆಹಲಿ: ದೇಶದ 9 ರಾಜ್ಯಗಳಲ್ಲಿ 72 ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದ ನಾಲ್ಕನೇ ಹಂತದ ಮತದಾನ ಬಹುತೇಕವಾಗಿ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಸಂಜೆ ಏಳು ಗಂಟೆ ವೇಳೆಗೆ ಶೇ. 62 ರಷ್ಟು ಮತದಾನವಾಗಿದೆ.

ಬಿಹಾರ, ಉತ್ತರ ಪ್ರದೇಶದ 26 ಕ್ಷೇತ್ರಗಳು ಸೇರಿದಂತೆ ಮಹಾರಾಷ್ಟ್ರ, ಒಡಿಶಾ, ರಾಜಸ್ತಾನ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ,  ಜಾರ್ಖಂಡ್  ಹಾಗೂ ಜಮ್ಮು- ಕಾಶ್ಮೀರ ರಾಜ್ಯಗಳಲ್ಲಿ ಬೆಳಗ್ಗೆಯಿಂದಲೂ ಮತದಾನ ನಡೆಯಿತು.

ಸಂಜೆ ಏಳು ಗಂಟೆಯವರೆಗೂ ಬಿಹಾರದಲ್ಲಿ ಶೇ. 58. 92, ಜಮ್ಮು- ಕಾಶ್ಮೀರದಲ್ಲಿ ಶೇ. 9. 79 , ಜಾರ್ಖಂಡ್  ಶೇ. 63. 77, ಮಧ್ಯ ಪ್ರದೇಶ- ಶೇ. 66. 52, ಮಹಾರಾಷ್ಟ್ರ ಶೇ. 55. 88, ಒಡಿಶಾ ಶೇ. 64. 05, ರಾಜಸ್ತಾನ ಶೇ. 66.44, ಉತ್ತರ ಪ್ರದೇಶ ಶೇ. 55. 57 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 76. 59 ರಷ್ಟು ಮತದಾನವಾಗಿದೆ.

ನಾಲ್ಕನೇ ಹಂತದ ಚುನಾವಣೆ ಮುಗಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾಧಿಕಾರಿ ಏಳು ಹಂತಗಳ ಚುನಾವಣೆಯಲ್ಲಿ ಮೊದಲ ಬಾರಿಗೆ 1. 91 ಕೋಟಿ ಮತದಾರರು  ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2014ಕ್ಕೆ ಹೋಲಿಸಿದ್ದರೆ ಈ ಸಂಖ್ಯೆಯಲ್ಲಿ ಶೇ. 20 ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು.

ಮುಂಬೈಯಲ್ಲಿ  ಮೊದಲ ಬಾರಿಗೆ ಮತ ಚಲಾಯಿಸಿದವರ ಸಂಖ್ಯೆ ಹೆಚ್ಚಾಗಿತ್ತು. 18 ರಿಂದ 19 ವರ್ಷದೊಳಗಿನ 1.19 ಕೋಟಿ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ಸಲ್ಮಾನ್ ಖಾನ್, ಶಾರೂಕ್ ಖಾನ್,  ವಿವೇಕ್ ಒಬೆರಾಯ್,  ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೊಲ್ಕರ್, ಉದ್ಯಮಿಗಳಾದ ಮುಕೇಶ್ , ಅನಿಲ್ ಅಂಬಾನಿ ಮತ್ತಿತರ ಘಟಾನುಘಟಿ ತಾರೆಯರು ಮತದಾನದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ನೆಚ್ಚಿನ ನಾಯಕರಿಗೆ ಮತ ಚಲಾಯಿಸಿದರು.
SCROLL FOR NEXT