ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ಇಂದು 9 ರಾಜ್ಯಗಳ ಒಟ್ಟು 72 ಕ್ಷೇತ್ರಗಳಲ್ಲಿ ಮತದಾನವಾಗುತ್ತಿದ್ದು, 900ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿವೆ.
4ನೇ ಹಂತದ ಮತದಾನದಲ್ಲಿ ಘಾಟಾನುಘಟಿ ಮತ್ತು ಪ್ರಮುಖ ನಾಯಕರ ಹಣೆ ಬರಹ ನಿರ್ಧಾರವಾಗಲಿದ್ದು, 72 ಕ್ಷೇತ್ರಗಳಲ್ಲಿ ಹತ್ತಾರು ಘಟಾನುಘಟಿ ನಾಯಕರು, ಭರವಸೆ ಮೂಡಿಸಿರುವ ನಾಯಕರು, ಉದಯೋನ್ಮುಖ ನಾಯಕರು, ಸುದ್ದಿ ಮಾಡಿದವರು ಮತ್ತು ವಿವಾದಗಳಿಂದ ಹೆಸರಾದ ಹಲವು ನಾಯಕರು ಸ್ಪರ್ಧಿಸಿದ್ದಾರೆ.
ಬಿಜೆಪಿಯ ಅನುಭವಿ ನಾಯಕರಾದ ಉಪೇಂದ್ರ ಕುಶ್ವಾಹ, ಗಿರಿರಾಜ್ ಸಿಂಗ್, ಗೋಪಾಲ್ ಶೆಟ್ಟಿ, ಬಾಬುಲ್ ಸುಪ್ರಿಯೋ, ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ಸಾಕ್ಷಿ ಮಹಾರಾಜ್ ಹಾಗೂ ಕಾಂಗ್ರೆಸ್ನ ಅನುಭವಿಗಳಾದ ಸಂಜಯ್ ನಿರುಪಮ್ ಮತ್ತು ಮಿಲಿಂದ್ ದೇವೋರಾ ಅವರು ಇಂದು ಕಣದಲ್ಲಿದ್ದಾರೆ.
ಅಂತೆಯೇ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ಪುತ್ರ ರಾಮಚಂದ್ರ ಪಾಸ್ವಾನ್ (ಸಮಷ್ಟೀಪುರ ಕ್ಷೇತ್ರ), ಸುನೀಲ್ ದತ್ ಪುತ್ರಿ ಪ್ರಿಯಾ ದತ್ (ಮುಂಬೈ ನಾರ್ಥ್ ಸೆಂಟ್ರಲ್) ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಪೂನಂ ಮಹಾಜನ್, ಅಜಿತ್ ಪವಾರ್ ಪುತ್ರ ಪಾರ್ಥ್ ಪವಾರ್ (ಶಿರೂರ್ ಲೋಕಸಭಾ ಕ್ಷೇತ್ರ), ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ (ಕನೌಜ್ ಕ್ಷೇತ್ರ), ಜಾರ್ಖಂಡ್ನ ಮಾಜಿ ಸಿಎಂ ಶಿಬು ಸೊರೇನ್ ಪುತ್ರಿ ಅಂಜನಿ ಸೊರೇನ್ (ಮಯೂರ್ ಭಂಜ್) ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.
ಇನ್ನು, ಜೆಎನ್ ಯು ವಿವಾದದ ಮೂಲಕ ಸುದ್ದಿ ಮಾಡಿದ್ದ ವಿದ್ಯಾರ್ಥಿ ಮುಖಂಡರಾಗಿದ್ದ ಕನ್ಹಯ್ಯ ಕುಮಾರ್ ಅವರು ಬಿಹಾರದ ಬೇಗುಸರೈ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಇದೇ ಕ್ಷೇತ್ರದಿಂದ ಬಿಜೆಪಿಯ ಹಿರಿಯ ಮುಖಂಡ ಗಿರಿರಾಜ್ ಸಿಂಗ್ ಸ್ಪರ್ಧಿಸಿದ್ದಾರೆ. ಅಂತೆಯೇ ಬಿಜೆಪಿಯ ಭದ್ರಕೋಟೆ ಎಂದೇ ಕರೆಯಲಾಗುವ ಮುಂಬೈ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಟಿ ಊರ್ಮಿಳಾ ಮತೊಂಡ್ಕರ್ ಅವರು ಸ್ಪರ್ಧಿಸಿದ್ದು, ಈ ಕ್ಷೇತ್ರದಿಂದ ಬಿಜೆಪಿಯ ಪ್ರಮುಖ ನಾಯಕ ಗೋಪಾಲ್ ಶೆಟ್ಟಿ ಅವರು ಸ್ಪರ್ಧಿಸಿದ್ದಾರೆ.
ಉಳಿದಂತೆ ಬಿಹಾರದ ಉಜಿಯಾರ್ ಪುರ್ ಕ್ಷೇತ್ರದಿಂದ ಉಪೇಂದ್ರ ಕುಶ್ವಾಹ, ಮುಂಬೈ ವಾಯುವ್ಯ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಜಯ್ ನಿರುಪಮ್, ಉತ್ತರ ಪ್ರದೇಶದ ಉನ್ನಾವೋ ಕ್ಷೇತ್ರದಿಂದ ಸಾಕ್ಷಿ ಮಹಾರಾಜ್ ಸೇರಿದಂತೆ ಹಲವು ಘಟಾನು ಘಟಿ ನಾಯಕರ ಭವಿಷ್ಯ ಇಂದು ಮತಪೆಟ್ಟಿಗೆ ಸೇರಲಿವೆ.