ನವದೆಹಲಿ: ದೆಹಲಿಯ ಶಾಸ್ತ್ರಿ ಭವನದಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಸರ್ಕಾರಿ ಕಡತಗಳನ್ನು ಸುಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಮೋದಿಜೀ, ನಿಮ್ಮ ತೀರ್ಪಿನ ದಿನ ಸಮೀಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ಶಾಸ್ತ್ರಿ ಭವನದ ಅಗ್ನಿ ಅವಘಡದ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕಡತಗಳನ್ನು ಸುಡುವುದರಿಂದ ಭ್ರಷ್ಟಾಚಾರ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನರ ನಿರ್ಧಾರ ಪ್ರಕಟವಾಗುವ ದಿನ ಹತ್ತಿರಾಗುತ್ತಿದೆ. ಎಚ್ಚರದಿಂದ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಇಂದು ಮಧ್ಯಾಹ್ನ ಶಾಸ್ತ್ರಿ ಭವನದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಶಾಸ್ತ್ರಿ ಭವನದ ಕೊನೆಯ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಲಿ ದುರಸ್ತಿಗೆ ಇರುವ ಕೂಲರ್ಗಳು, ಎಲೆಕ್ಟ್ರಿಕಲ್ ವೈರ್ಗಳು ಮತ್ತಿತರ ಗುಜರಿ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು. ಅವುಗಳಿಗೆ ಬೆಂಕಿ ತಗುಲಿತ್ತು. ಆರರಿಂದ ಏಳು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದವು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದರು.
ಈ ಕಟ್ಟಡದಲ್ಲಿ ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಅಭಿವೃದ್ಧಿ, ಕಾನೂನು ಮತ್ತು ನ್ಯಾಯಾಂಗ ಇಲಾಖೆ, ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಪೊರೇಟ್ ವ್ಯವಹಾರಗಳು, ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್, ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿ ಹಲವು ಪ್ರಮುಖ ಇಲಾಖೆಗಳ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಈ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ರಾಹುಲ್ ಗಾಂಧಿ ಶಂಕೆ ವ್ಯಕ್ತಪಡಿಸಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ಕಡತಗಳು ಶಾಸ್ತ್ರಿ ಭವನದಲ್ಲಿ ಇದ್ದಿರಬಹುದಾದ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಆ ಕಡತಗಳನ್ನು ಸುಟ್ಟು ಹಗರಣದಿಂದ ಪಾರಾಗಲು ಪ್ರಧಾನಿ ನರೇಂದ್ರ ಮೋದಿ ಯತ್ನಿಸಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ.