ಮುಂಬೈ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶರದ್ ಪವಾರ್ ಅವರು, ‘ನಮ್ಮ ಕುಟುಂಬದಿಂದ ಮಗಳು ಸುಪ್ರಿಯಾ ಸುಳೆ ಮತ್ತು ಮೊಮ್ಮಗ ಪಾರ್ಥ ಪವಾರ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಈ ಹಿಂದೆ ನಾನು 14 ಬಾರಿ ಸ್ಪರ್ಧೆ ಮಾಡಿದ್ದೇನೆ. ಹೀಗಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಲು ಇದು ಸೂಕ್ತ ಸಮಯ ಎಂದು ತಿಳಿಸಿದ್ದಾರೆ.
78 ವರ್ಷದ ಶರದ್ ಪವಾರ್ ಅವರು ನೈರುತ್ಯ ಮಹಾರಾಷ್ಟ್ರದ ಮಾಧ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮಾಜಿ ಕೇಂದ್ರ ಸಚಿವ ಪವಾರ್ ಅವರು, ತಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಹೇಳಿದ್ದಾರೆ.