ಬಿಜೆಪಿಗೆ ಸೇರ್ಪಡೆಯಾದ ಗೌತಮ್ ಗಂಭೀರ್
ನವದೆಹಲಿ: ಮಾಜಿ ಕ್ರಿಕೆಟಿಗೆ ಗೌತಮ್ ಗಂಭೀರ್ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ಪರ ನಿಲುವಿನ ಮೂಲಕ ಸುದ್ದಿಗೆ ಗ್ರಾಸವಾಗುತ್ತಿದ್ದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೊನೆಗೂ ತಮ್ಮ ರಾಜಕೀಯ ಕ್ಷೇತ್ರದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಹೌದು ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಗೌತಮ್ ಗಂಭೀರ್ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಇಂದು ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೆಹಲಿಯಲ್ಲಿ ಇಂದು ಗೌತಮ್ ಗಂಭೀರ್ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮೂಲಗಳ ಪ್ರಕಾರ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಿಂದ ಗೌತಿ ಬಿಜೆಪಿ ಪಕ್ಷದ ಪರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಗೌತಿ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ನಾನೂ ಸ್ಪೂರ್ತಿಗೊಂಡಿದ್ದೇನೆ. ಅವರ ಸೇವೆಯಲ್ಲಿ ನಾನೂ ಕೂಡ ಕೈ ಜೋಡಿಸಬೇಕು ಎನ್ನುವ ಸಲುವಾಗಿ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಗೌತಮ್ ಗಂಭೀರ್ ನನ್ನ ಕುಟುಂಬದೊಂದಿಗೆ ಸಮಯ ಕಳೆಯುವುದಾಗಿ ಹೇಳಿದ್ದರು. ಅಂತೆಯೇ ಸಮಯ ಸಿಕ್ಕಾಗಲೆಲ್ಲಾ ಬಿಜೆಪಿ ಪರ ಟ್ವೀಟ್ ಮಾಡುತ್ತಿದ್ದ ಗೌತಿ, ಆಗಾಗ ಕಾಂಗ್ರೆಸ್ ಪಕ್ಷದ ಕಾಲೆಳೆಯುತ್ತಿದ್ದರು. ಇನ್ನು 2011ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಕ್ರಿಕೆಟ್ ತಂಡದಲ್ಲಿ ಇದ್ದ ಗೌತಿ ಫೈನಲ್ ಪಂದ್ಯದಲ್ಲಿ ಹೀರೋ ಕೂಡ ಆಗಿದ್ದರು. ಫೈನಲ್ ನಲ್ಲಿ ಲಂಕಾ ನೀಡಿದ್ದ 274 ರನ್ ಗಳ ಸವಾಲಿನ ಗುರಿ ಮುಟ್ಟುವಲ್ಲಿ ಗೌತಮ್ ಗಂಭೀರ್ ಗಳಿಸಿದ್ದ 97 ರನ್ ಗಳ ಅಮೋಘ ಆಟ ಕೂಡ ನೆರವಾಗಿತ್ತು.