ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಗೆ ಬಿಜೆಪಿ ಬೆಂಬಲ: ಅಧಿಕೃತ ಘೋಷಣೆ
ನವದೆಹಲಿ: ಲೋಕಸಭೆ ಚುನಾವಣೆಗಾಗಿ ಬಿಜೆಪಿ ಐದನೇ ಪಟ್ಟಿ ಶನಿವಾರ ಬಿಡುಗಡೆಯಾಗಿದೆ. ಕರ್ನಾಟಕದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಶ್ ಗೆ ಬೆಂಬಲಿಸಲು ತೀರ್ಮಾನಿಸಿರುವ ಕಮಲ ಪಕ್ಷ ಮಂಡ್ಯದಲ್ಲಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ.
ತೀವ್ರ ಕುತೂಹಲ ಮೂಡಿಸಿದ್ದ ಮಂಡ್ಯದಲ್ಲಿ ಸುಮಲತಾ ಅವರಿಗೆ ಬೆಂಬಲಿಸಿರುವುದಾಗಿ ನವದೆಹಲಿಯಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಪಕ್ಷದ ನಾಯಕ ಜೆ.ಪಿ.ನಡ್ಡಾ, ಅಧಿಕೃತವಾಗಿ ಘೋಷಿಸಿದ್ದಾರೆ. ಉಇದರೊಡನೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ನೇರ ಹಣಾಹಣಿ ನಡೆಯುವುದು ಖಚಿತವಾಗಿದೆ.
ಇದಕ್ಕೆ ಮುನ್ನ ಡಾ. ಸಿದ್ದರಾಮಯ್ಯ ಅವರನ್ನು ಮಂಡ್ಯದಿಂದಕಣಕ್ಕಿಳಿಸಲು ತೀರ್ಮಾನಿಸಿದ್ದ ಬಿಜೆಪಿ ಕಡೆ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿಕೊಂಡಿದೆ. ಸುಮಲತಾ ಅವರನ್ನು ಬೆಂಬಲಿಸಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಬಿಜೆಪಿ ನಿರ್ಧರಿಸಿದೆ.
ಇನ್ನು ಕೋಲಾರದಿಂಡ ಸಿ. ಮುನಿಸ್ವಾಮಿ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಇನ್ನೂ ಬಾಕಿ ಉಳಿದ ಐದು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ಇನ್ನೂ ಪ್ರಕಟಿಸಲಿಲ್ಲ. ಚಿಕ್ಕೋಡಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ರಾಯಚೂರು ಮತ್ತು ಕೊಪ್ಪಳ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇನ್ನಷ್ಟೇ ಪ್ರಕಟವಾಗಬೇಕಿದೆ.