ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ 29 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದ್ದು, ಉತ್ತರ ಪ್ರದೇಶದ ಕಾನ್ಪುರ ಲೋಕಸಭಾ ಕ್ಷೇತ್ರದಿಂದ ಪಕ್ಷದ ಹಿರಿಯ ಮುಖಂಡ ಮುರಳಿ ಮನೋಹರ್ ಜೋಶಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಕ್ಷೇತ್ರಕ್ಕೆ ಸತ್ಯದೇವ್ ಪಚೂರಿ ಅವರಿಗೆ ಟಿಕೆಟ್ ನೀಡಲಾಗಿದೆ.
ಇಂದು ಬೆಳಗ್ಗೆಯಷ್ಟೇ ಬಿಜೆಪಿ ಸೇರ್ಪಡೆಗೊಂಡಿದ್ದ ಚಿತ್ರ ನಟಿ ಜಯಪ್ರದಾ ಅವರು ರಾಮ್‍ಪುರ ಕ್ಷೇತ್ರ ಹುರಿಯಾಳಾಗಿದ್ದಾರೆ.
ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷದ ಮುಖಂಡ ಅರುಣ್ ಸಿಂಗ್ ಬಿಡುಗಡೆ ಮಾಡಿದ ಪಟ್ಟಿಯಲ್ಲಿ, ಕೇಂದ್ರ ಸಚಿವೆ ಮೇನಕಾ ಗಾಂಧಿ ಹಾಗೂ ಅವರ ಪುತ್ರ ವರುಣ್ ಗಾಂಧಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ವರುಣ್ ಗಾಂಧಿ ಪ್ರತಿನಿಧಿಸುತ್ತಿದ್ದ ಸುಲ್ತಾನ್‍ಪುರ್ ದಿಂದ ಮೇನಕಾಗಾಂಧಿ, ಫಿಲ್‍ಬಿಟ್‍ನಿಂದ ವರುಣ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ.
1989ರಲ್ಲಿ ಜನತಾ ದಳ ಟಿಕೆಟ್ ನಿಂದ ಮೇನಕಾ ಗಾಂಧಿ ಪಿಲಿಭಿಟ್ ಕ್ಷೇತ್ರದಿಂದ ಮೊದಲ ಬಾರಿಗೆ ಗೆದ್ದಿದ್ದರು. 1998 ಮತ್ತು 1999 ರಲ್ಲಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಮತ್ತು ನಂತರ 2004 ಮತ್ತು 2014 ರಲ್ಲಿ ಬಿಜೆಪಿ ಟಿಕೆಟ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
2009 ರಲ್ಲಿ ಮೇನಕಾ ಅವರು ಆನ್ಲಾದಿಂದ ಗೆದ್ದಿದ್ದರೆ, ಅವರ ಪುತ್ರ ಪಿಲಿಬಿಟ್ ಸ್ಥಾನ ಉಳಿಸಿಕೊಂಡಿದ್ದರು. ಉಳಿದಂತೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಸಚಿವ ರೀಟಾ ಬಹುಗುಣ ಜೋಶಿ ಅಲಹಾಬಾದ್ ನಿಂದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಹಾಲಿ ಬಿಜೆಪಿ ಸದಸ್ಯ ಮತ್ತು ಕೇಂದ್ರ ಸಚಿವ ಮನೋಜ್ ಸಿನ್ಹಾ ಮತ್ತೆ ಘಾಜಿಪುರದಿಂದ ಸ್ಪರ್ಧಿಸುತ್ತಿದ್ದು, ಡೊಮರಿಯಾಗಂಜ್ ಟಿಕೆಟ್ ಹಾಲಿ ಸಂಸದೆ ಜಗದಾಂಬಿಕಾ ಪಾಲ್‍ಗೆ ಮತ್ತೆ ಟಿಕೆಟ್ ನೀಡಲಾಗಿದೆ.
ಪಶ್ಚಿಮ ಬಂಗಾಳದ ಪ್ರಕಟಿತ ಸ್ಥಾನಗಳ ಪೈಕಿ ಪ್ರತಿಷ್ಠಿತ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ ಬಿಜೆಪಿ, ನಿಲಂಜನ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಈ ಕ್ಷೇತ್ರವನ್ನು ಸದ್ಯ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುತ್ತಿದ್ದಾರೆ.
ನಟ ಜಾಯ್ ಬ್ಯಾನರ್ಜಿ ಉಲುಬೇರಿಯಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಹಿರಿಯ ರಾಜಕಾರಣಿ ಹುಮಾಯೂನ್ ಕಬೀರ್ ಅವರು ಮುರ್ಷಿದಾಬಾದ್ ನಿಂದ ಬಿಜೆಪಿ ಅಭ್ಯರ್ಥಿಯಾಗಿ ಹೋರಾಟಕ್ಕಿಳಿದಿದ್ದಾರೆ.
ಮಂಗಳವಾರ ಬಿಡುಗಡೆ ಮಾಡಲಾಗಿರುವ ಬಿಜೆಪಿ ಪಟ್ಟಿಯಲ್ಲಿ ಅನೇಕ ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗಿದೆ. ಈ ಪೈಕಿ ಉತ್ತರ ಪ್ರದೇಶದ ಫತೇಪುರ್ ನಿಂದ ಸಾಧ್ವಿ ನಿರಂಜನ್ ಜ್ಯೋತಿ, ಫೈಜಾಬಾದ್ ನಿಂದ ಲಲ್ಲು ಸಿಂಗ್, ಇಟಾವದಿಂದ ರಾಮಶಂಕರ್ ಕಟೇರಿಯಾ ಹಾಗೂ ಕೌಶಂಬಿಯಿಂದ ವಿನೋದ್ ಸೋನ್ಕರ್ ಬಿಜೆಪಿ ಹುರಿಯಾಳುಗಳಾಗಿ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷ ಮಹೇಂದ್ರ ನಾಥ್ ಪಾಂಡೆ ಮತ್ತೆ ಚಂಡೌಲಿಯಿಂದ ಸ್ಪರ್ಧಿಸುತ್ತಿದ್ದಾರೆ.