ಅರುಣಾಚಲಪ್ರದೇಶ: ದೇಶಕ್ಕೆ ಭದ್ರತೆ ನೀಡುವ ಚೌಕೀದಾರನಿಗೆ ಮತ ಚಲಾವಣೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅರುಣಾಚಲ ಪ್ರದೇಶದ ಜನತೆಗೆ ಕರೆ ನೀಡಿದ್ದಾರೆ.
ಮಾ.30 ರಂದು ಅರುಣಾಚಲ ಪ್ರದೇಶದ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
ದೇಶದ ಅಭಿವೃದ್ಧಿ, ಯಶಸ್ಸು ಕಂಡು ವಿಪಕ್ಷಗಳಿಗೆ ನಿರಾಶೆಯುಂಟಾಗಿದೆ. ದೇಶ ಏನೇ ಸಾಧನೆ ಮಾಡಿದರೂ ನಿಮಗೆ ಸಂತಸವಾಗುವುದಿಲ್ಲವೇ? ತಮ್ಮ ಸಾಮಾಜಿಕ ಆರ್ಥಿಕ ಸ್ಥಿತಿಯನ್ನೂ ಮೀರಿ ಜನತೆ ದೇಶದ ಸಾಧನೆಗಳ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ಆದರೆ ಕೆಲವರು ಭಾರತದ ಅಭಿವೃದ್ಧಿ ಹಾಗೂ ಯಶಸ್ಸನ್ನು ಕಂಡು ಎದೆಗುಂದುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ನ್ನು ಭ್ರಷ್ಟಾಚಾರದ ಸಮಾನಾರ್ಥಕ ಎಂದು ಟೀಕಿಸಿರುವ ಪ್ರಧಾನಿ, ದೇಶದ ಜನತೆಯನ್ನು ಲಘುವಾಗಿ ಪರಿಗಣಿಸುವುದು ಕಾಂಗ್ರೆಸ್ ಗೆ ಅಭ್ಯಾಸವಾಗಿಬಿಟ್ಟಿದೆ ಎಂದೂ ಆರೋಪಿಸಿದ್ದಾರೆ.
ಭಯೋತ್ಪಾದಕರನ್ನು ಭಾರತ ಅವರ ನೆಲದಲ್ಲೇ ಹೊಡೆದಾಗ ವಿಪಕ್ಷಗಳು ಹೇಗೆ ನಡೆದುಕೊಂಡವು ಎಂಬುದನ್ನು ನೀವೆಲ್ಲರೂ ನೋಡಿದ್ದೀರಿ. ನಮ್ಮ ವಿಜ್ಞಾನಿಗಳು ಸಾಧನೆ ಮಾಡಿದಾಗಲೆಲ್ಲಾ ಅವರ ಬಗ್ಗೆ ಲಘುವಾಗಿ ಮಾತನಾಡಲು ಕಾಂಗ್ರೆಸ್ ಕಾರಣಗಳನ್ನು ಹುಡುಕುತ್ತಿರುತ್ತದೆ ಇಂತಹ ವಿಪಕ್ಷಗಳಿಗೆ ಪಾಠ ಕಲಿಸಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.