ದೇಶ

ಚುನಾವಣಾ ವೆಚ್ಚ: ದಿಗ್ವಿಜಯ್‌ ಸಿಂಗ್, ಪ್ರಗ್ಯಾ ಸಿಂಗ್ ಗೆ ಚುನಾವಣಾ ಆಯೋಗ ನೊಟೀಸ್‌

Lingaraj Badiger
ಭೋಪಾಲ್: ಚುನಾವಣಾ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್ ಮತ್ತು ಅವರ ಪ್ರತಿಸ್ಫರ್ಧಿ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಚುನಾವಣಾ ಆಯೋಗ ಶನಿವಾರ ನೋಟಿಸ್ ಜಾರಿ ಮಾಡಿದೆ.
ಈ ಇಬ್ಬರು ಅಭ್ಯರ್ಥಿಗಳು ಆಯೋಗಕ್ಕೆ ನೀಡಿದ್ದ ಮಾಹಿತಿಗಿಂತಲೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದು, ಈ ಸಂಬಂಧ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್‌ ನ ದಿಗ್ವಿಜಯ್‌ ಸಿಂಗ್‌ ಅವರು ಶುಕ್ರವಾರದ ವರೆಗೆ ತಮ್ಮ ಚುನಾವಣಾ ಖರ್ಚು ವೆಚ್ಚವನ್ನು 21,30,136 ರೂ. ಎಂದು ತೋರಿಸಿದ್ದಾರೆ. ಆದರೆ ಚುನಾವಣಾ ಆಯೋಗದ ವಿಶೇಷ ಖರ್ಚು-ವೆಚ್ಚ ವೀಕ್ಷಕ ತಂಡದವರ ಪ್ರಕಾರ ದಿಗ್ವಿಜಯ್‌ ಖರ್ಚು ಮಾಡಿರುವ ಮೊತ್ತ 39,47,674 ಎಂದು ತಿಳಿದು ಬಂದಿದೆ.
ಇನ್ನು ಪ್ರಗ್ಯಾ ಸಿಂಗ್ ಠಾಕೂರ್‌ ಅವರು ತಾವು 6,27,663 ರೂ. ಗಳನ್ನು ಚುನಾವಣೆಗಾಗಿ ಖರ್ಚು ಮಾಡಿರುವುದಾಗಿ ವಿವರ ಸಲ್ಲಿಸಿದ್ದಾರೆ. ಆದರೆ ಆಕೆಯ ನೈಜ ಖರ್ಚು ವೆಚ್ಚ ಮೊತ್ತ 13,51,756 ರೂ. ಎಂದು ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ.
ಚುನಾವಣಾ ಆಯೋಗದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಚುನಾವಣಾ ಪ್ರಕ್ರಿಯೆ ಮುಗಿದ 90 ದಿನಗಳ ಒಳಗೆ ನೋಂದಾಯಿತ ರಾಜಕೀಯ ಪಕ್ಷಗಳು ಚುನಾವಣೆಗಾಗಿ ತಾವು ಖರ್ಚು ಮಾಡಿರುವ ಹಣದ ಲೆಕ್ಕಪತ್ರವನ್ನು ಆಯೋಗಕ್ಕೆ ಸಲ್ಲಿಸಬೇಕಿದೆ.
SCROLL FOR NEXT