ದೇಶ

ಪ್ರಧಾನಿ ಮೋದಿಗೆ ಕ್ಲೀನ್ ಚಿಟ್: ಚುನಾವಣಾ ಆಯೋಗದ ನಿರ್ಧಾರಕ್ಕೆ ಓರ್ವ ಆಯುಕ್ತರಿಂದ ಆಕ್ಷೇಪ

Lingaraj Badiger
ನವದೆಹಲಿ: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್​ಚಿಟ್ ನೀಡಿದೆ. ಆದರೆ ಇದು ಸರ್ವಾನುಮತದ ನಿರ್ಣಯವಾಗಿರಲಿಲ್ಲ. ಪ್ರಧಾನಿಗೆ ಕ್ಲೀನ್ ಚಿಟ್ ನೀಡಲು ಆಯೋಗದ ಓರ್ವ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಉನ್ನತ ಮೂಲಗಳು ತಿಳಿಸಿವೆ.
ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹಲವು ದೂರುಗಳನ್ನು ನೀಡಿದೆ. ಆದರೆ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್, ಅಲ್ಪಸಂಖ್ಯಾತ ಮತಕ್ಷೇತ್ರಕ್ಕೆ ರಾಹುಲ್ ಗಾಂಧಿ ಸ್ಪರ್ಧೆ ಹಾಗೂ ಪಾಕಿಸ್ತಾನದ ಮೇಲೆ ಅಣ್ವಸ್ತ್ರ ಬಳಕೆ ಹೇಳಿಕೆ ಕುರಿತು ಈಗಾಗಲೇ ಚುನಾವಣಾ ಆಯೋಗ ಮೋದಿಗೆ ಕ್ಲೀನ್ ಚಿಟ್ ನೀಡಿದೆ. ಇದರಲ್ಲಿ ಅಣ್ವಸ್ತ್ರಕ್ಕೆ ಸಂಬಂಧಿಸಿದ ಹೇಳಿಕೆ ಹೊರತುಪಡಿಸಿ ಉಳಿದೆ ಪ್ರಕರಣಗಳಲ್ಲಿ ಪ್ರಧಾನಿಗೆ ಕ್ಲೀನ್​ಚಿಟ್ ನೀಡಲು ಓರ್ವ ಆಯುಕ್ತರು ತೀವ್ರ ಆಕ್ಷೇಪವ್ಯಕ್ತಪಡಿಸಿದ್ದರು. ಪ್ರಧಾನಿ ವಿರುದ್ಧ ಕ್ರಮ ಅಥವಾ ಎಚ್ಚರಿಕೆ ಸಂದೇಶ ನೀಡಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಪ್ರಧಾನಿ ವಿರುದ್ಧದ ಪ್ರಕರಣಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮತ್ತು ಚುನಾವಣಾ ಆಯುಕ್ತರಾದ ಅಶೋಕ್ ಲವಾಸ ಹಾಗೂ ಸುಶಿಲ್ ಚಂದ್ರ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. 
ಒಂದು ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆಯುಕ್ತರು ಹಾಗೂ ಆಯುಕ್ತರ ನಡುವೆ ಭಿನ್ನಾಭಿಪ್ರಾ ವ್ಯಕ್ತವಾದರೆ 2:1 ಬಹುಮತದ ಆಧಾರದ ಮೇಲೆ ಅಂತಿಮ ನಿರ್ಧಾರ ಪ್ರಕಟಿಸಲಾಗುತ್ತದೆ.
ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ 11 ದೂರುಗಳು ಸಲ್ಲಿಕೆಯಾಗಿದ್ದು, ಮೂರು ಪ್ರಕರಣದಲ್ಲಿ ಮಾತ್ರ ತೀರ್ಪು ಬಂದಿದೆ. ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧದ ಎಲ್ಲ ದೂರುಗಳನ್ನು ಮೇ 6ರೊಳಗೆ ವಿಚಾರಣೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
SCROLL FOR NEXT