ದೇಶ

'ಸ್ಪೀಡ್ ಬ್ರೇಕರ್' ದೀದಿ ಫೋನಿ ಚಂಡಮಾರುತದ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ: ಪ್ರಧಾನಿ ಮೋದಿ

Lingaraj Badiger
ತಮ್ಲುಕ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಫೋನಿ ಚಂಡಮಾರುತದ ವಿಚಾರದಲ್ಲೂ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಫೋನಿಯಿಂದಾದ ಹಾನಿಯ ಕುರಿತು ಮಾಹಿತಿ ಪಡೆಯಲು ನಾನು ಪಶ್ಚಿಮ ಬಂಗಾಳ ಸಿಎಂ ಕರೆ ಮಾಡಿದರೆ ಅವರು ನನ್ನ ಕರೆಯನ್ನು ಸ್ವೀಕರಿಸಲಿಲ್ಲ ಎಂದು ದೂರಿದ್ದಾರೆ.
ಇಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಬಂಗಾಳದ ಜನರ ಕ್ಷೇಮ ಸಮಾಚಾರ ವಿಚಾರಿಸಲು ನಾನು ಕರೆ ಮಾಡಿದ್ದೆ. ಆದರೆ ನನ್ನ ಕರೆಯನ್ನು ಸ್ವೀಕರಿಸದ ದೀದಿಯದು ದುರಹಂಕಾರದ ಪ್ರವೃತ್ತಿ ಎಂದು ಟೀಕಿಸಿದ್ದಾರೆ.
ನಾನು ಒಡಿಶಾದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪಶ್ಚಿಮ ಬಂಗಾಳದಲ್ಲಿ ಸೈಕ್ಲೋನ್ ನಿಂದ ಉಂಟಾದ ಹಾನಿಯ ಬಗ್ಗೆ ಮಾತನಾಡಲು ಮಮತಾ ಬ್ಯಾನರ್ಜಿ ಅವರಿಗೆ ಫೋನ್ ಮಾಡಿದ್ದೆ. ಆದರೆ ಸೈಕ್ಲೋನ್ ನಿಂದಾಗಿ ಇಡೀ ರಾಜ್ಯ ತತ್ತರಿಸಿರುವಾಗ ಅವರು ರಾಜಕೀಯ ಲೆಕ್ಕಾಚಾರ ಮಾಡುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಸ್ಪೀಡ್ ಬ್ರೇಕರ್ ದೀದಿ ಅವರು ಚಂಡಮಾರುತದ ವಿಚಾರದಲ್ಲೂ ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ನಾನು ಫೋನ್ ಮಾಡಿದ್ದರೂ ಸ್ವೀಕರಿಸದೆ ದುರಂಹಕಾರ ತೋರಿಸಿದ್ದಾರೆ ಎಂದರು.
ಮಮತಾ ಬ್ಯಾನರ್ಜಿ ವೋಟ್ ಬ್ಯಾಂಕ್ ಭಯದಿಂದಾಗಿ ಉಗ್ರ ಮಸೂದೆ ಅಜರ್ ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸಿದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಲ್ಲ ಎಂದರು.
SCROLL FOR NEXT