ಮುಂಬೈ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವುದಿಲ್ಲ. ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಬೇಕಾಗುತ್ತದೆ ಎಂದು ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಮಂಗಳವಾರ ಹೇಳಿದೆ.
ನಿನ್ನೆಯಷ್ಟೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಮಿತ್ರ ಪಕ್ಷಗಳ ಬೆಂಬಲವಿಲ್ಲದೆ ಈ ಬಾರಿ ಸರ್ಕಾರ ರಚನೆ ಮಾಡುವುದು ಕಷ್ಟ ಎಂದು ಹೇಳಿದ್ದರು. ಈ ಕುರಿತು ಇಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ರಾಮ್ ಮಾಧವ್ ಅವರ ಅಭಿಪ್ರಾಯ ಸರಿ ಇದೆ. ಬಿಜೆಪಿ ಸರಳ ಬಹುಮತ ಸಿಗುವುದು ಸಾಧ್ಯತೆ ಕಡಿಮೆ. ಸರ್ಕಾರ ರಚನೆ ಮಾಡಲು ಬಿಜೆಪಿ ಇತರೆ ಪಕ್ಷಗಳನ್ನು ಅವಲಂಭಿಸಬೇಕು ಎಂದಿದ್ದಾರೆ.
ಈ ಬಾರಿಯೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಎನ್ ಡಿಎ ಸರಳ ಬಹುಮತ ಪಡೆಯಲಿದೆ ಎಂದು ರಾವತ್ ಹೇಳಿದ್ದಾರೆ.
ಈ ಬಿಜೆಪಿಗೆ ಸರ್ಕಾರ ರಚಿಸಲು ಮಿತ್ರ ಪಕ್ಷಗಳ ನೆರವು ಅಗತ್ಯವಾಗಲಿದೆ. ಒಂದು ವೇಳೆ 271 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ನಾವು ಸಂತೋಷವಾಗಿರುತ್ತೇವೆ. ಆದರೆ ಎನ್ ಡಿಎ ಸ್ಪಷ್ಟ ಬಹುಮತ ಹೊಂದಲಿದೆ ಎಂದು ರಾಮ್ ಮಾಧವ್ ಬ್ಲೂಮ್ ಬರ್ಗ್ ಸುದ್ದಿ ಸಂಪಾದಕ ಜಾನ್ ಮೈಕೆಲ್ ಲೆಥ್ ವೈಟ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.