ಕೊಲ್ಕತಾ: ಆಂಧ್ರ ಪ್ರದೇಶ ಮುಖ್ಯಮಂತ್ರಿ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಗುರುವಾರ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪರ ಪ್ರಚಾರ ನಡೆಸಿದರು.
ಇಂದು ಪಶ್ಚಿಮ ಬಂಗಾಳದ ಖರಗ್‌ಪುರ್‌ದಲ್ಲಿ ಟಿಎಂಸಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಂಧ್ರ ಸಿಎಂ, ಮಮತಾ ಬ್ಯಾನರ್ಜಿ ಬಂಗಾಳದ ಹುಲಿ. ಇಂದು ಬಂಗಾಳ ಏನು ಯೋಚನೆ ಮಾಡುತ್ತದೋ ನಾಳೆ ದೇಶವೂ ಅದನ್ನೇ ಯೋಚಿಸುತ್ತದೆ ಎಂದರು.
ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಿಡಿದೆದ್ದು ಎನ್‌ಡಿಎ ಮೈತ್ರಿಕೂಟದಿಂದ ಹೊರ ಬಂದು ಮಹಾಘಟಬಂಧನ್‌ನ ಭಾಗವಾಗಿದ್ದಾರೆ. ಕಾಂಗ್ರೆಸ್ , ಆಮ್ ಆದ್ಮಿ ಪಕ್ಷ, ಎಸ್,ಆರ್‌ಜೆಡಿ , ಜೆಡಿಎಸ್ ಸೇರಿ ಹಲವು ಪಕ್ಷಗಳ ಪ್ರಮುಖ ನಾಯಕರೊಂದಿಗೆ ಮಾತುಕತೆಗಳನ್ನೂ ನಡೆಸಿದ್ದಾರೆ. ಚುನಾವಣಾ ದಿನಾಂಕ ಘೋಷಣೆಗೂ ಮುನ್ನ ಬಿಜೆಪಿ ಸೋಲಿಸುವ ರಣತಂತ್ರ ಹಣೆಯಲು ಪ್ರಮುಖ ಪಕ್ಷಗಳ ನಾಯಕರ ಸಭೆಯನ್ನೂ ಕರೆದಿದ್ದರು.