ದೇಶ

ಪಿತ್ರೋಡಾ ಹೇಳಿಕೆ ವೈಯಕ್ತಿಕ, ಅದು ಪಕ್ಷದ ಅಭಿಪ್ರಾಯವಲ್ಲ: ಕಾಂಗ್ರೆಸ್ ಸ್ಪಷ್ಟನೆ

Lingaraj Badiger
ನವದೆಹಲಿ: 1984ರ ಸಿಖ್ ವಿರೋಧಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಶುಕ್ರವಾರ ಸ್ಪಷ್ಟೀಕರಣ ನೀಡಿದೆ.
ಪಿತ್ರೋಡಾ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್, 'ಸ್ಯಾಮ್ ಪಿತ್ರೋಡಾ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಷ್ಟೇ. ಪಕ್ಷದ ಅಭಿಪ್ರಾಯವಲ್ಲ. ಪಿತ್ರೋಡಾ ಸೇರಿದಂತೆ ಯಾರೇ ವೈಯಕ್ತಿಕವಾಗಿ ನೀಡುವ ಹೇಳಿಕೆ ಅದು ಅವರವರ ವೈಯಕ್ತಿಕ ಅಭಿಪ್ರಾಯ. ಅದು ಕಾಂಗ್ರೆಸ್ ಪಕ್ಷದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದೆ.
ಹಿಂಸೆ ಮತ್ತು ದಂಗೆ ಎಂದಿಗೂ ಸ್ವೀಕಾರಾರ್ಹವಲ್ಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕತ್ವ ಎಂದಿಗೂ 2002ರ ಗುಜರಾತ್ ದಂಗೆಯಂತೆಯೇ 1984ರ ದಂಗೆಗೂ ನ್ಯಾಯ ಸಿಗಬೇಕು ಎಂಬ ಬೇಡಿಕೆ ಇಡುತ್ತದೆ. ಪಿತ್ರೋಡಾ ಹೇಳಿಕೆಗೂ ನಮಗೂ ಸಂಬಂಧವಿಲ್ಲ. ಯಾವುದೇ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದಿರಿ ಎಂದು ನಾವು ಅವರಿಗೆ ಸೂಚಿಸಿದ್ದೇವೆ. ಬಿಜೆಪಿ ಅವರ ಹೇಳಿಕೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸ್ಯಾಮ್ ಪಿತ್ರೋಡಾ ಅವರು, ಸಿಖ್ ನರಮೇಧದ ಕುರಿತು ಕೇಳಿದ ಪ್ರಶ್ನೆಗೆ ಆಗಿದ್ದು ಆಗಿ ಹೋಯಿತು ಏನು ಮಾಡಲು ಸಾಧ್ಯ. ಈಗ ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕೆಲಸಗಳ ಕುರಿತು ಮಾತನಾಡಿ ಎಂದಿದ್ದರು. 
ಪಿತ್ರೋಡಾ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕರ ಹೇಳಿಕೆ ಅವರ ಸೊಕ್ಕಿನ ಪರಮಾವಧಿಯಾಗಿದ್ದು, ಗಾಂಧಿ ಕುಟುಂಬದ ಆಪ್ತರ ಈ ಹೇಳಿಕೆ ಕಾಂಗ್ರೆಸ್ ಜನ ಸಾಮಾನ್ಯರ ಮೇಲಿರುವ ಕಾಳಜಿಯನ್ನು ಮತ್ತು ಮಾನವೀಯತೆಯನ್ನು ತೋರಿಸುತ್ತದೆ ಎಂದಿದ್ದರು.
SCROLL FOR NEXT