ದೇಶ

ನೀತಿ ಸಂಹಿತೆ ಉಲ್ಲಂಘಿಸಿಲ್ಲ, ಕಾಂಗ್ರೆಸ್ ವಿರುದ್ಧ ತಾರತಮ್ಯ ಮಾಡಬೇಡಿ: ಚು.ಆಯೋಗಕ್ಕೆ ರಾಹುಲ್ ಗಾಂಧಿ ಉತ್ತರ

Sumana Upadhyaya
ನವದೆಹಲಿ: ನರೇಂದ್ರ ಮೋದಿ ಸರ್ಕಾರ ಬುಡಕಟ್ಟು ಜನಾಂಗದವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನನ್ನು ಜಾರಿಗೆ ತಂದಿದೆ ಎಂದು ಹೇಳುವಾಗ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗಕ್ಕೆ 11 ಪುಟಗಳ ಉತ್ತರ ನೀಡಿರುವ ಅವರು, ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರುಗಳು ಬಂದಾಗ ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತವಾಗಿ ವರ್ತಿಸಬೇಕು ಎಂದು ಹೇಳಿದ್ದಾರೆ.
ಚುನಾವಣಾ ಆಯೋಗ ಹೊರಡಿಸಿದ್ದ ಶೋಕಾಸ್ ನೊಟೀಸ್ ಗೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಹೀಗೆ ಹೇಳಿದ್ದಾರೆ. ಕಳೆದ ತಿಂಗಳು 23ರಂದು ಮಧ್ಯ ಪ್ರದೇಶದ ಶಹ್ಡೋಲ್ ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ತಮ್ಮಿಂದ ಯಾವುದೇ ರೀತಿಯಲ್ಲಿಯೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ. ತಾವು ಮೋದಿ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಟೀಕಿಸುವಾಗ ರಾಜಕೀಯ ಸಹಜವಾದ ಭಾಷಣ ಮಾಡಿದ್ದೆ ಎಂದಿದ್ದಾರೆ.
ತಾವು ವಿರೋಧ ಪಕ್ಷದ ಮುಖ್ಯಸ್ಥರಾಗಿರುವುದರಿಂದ ಲೋಕಸಭೆ ಚುನಾವಣೆ ವೇಳೆ ತಮ್ಮ ಪ್ರಚಾರದ ದಿಕ್ಕನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ಆಪಾದಿಸಿದ್ದಾರೆ.
ಬಿಜೆಪಿಯ ಬುಡಕಟ್ಟು ಜನಾಂಗದ ವಿರೋಧಿ ನೀತಿಗಳನ್ನು ವಿರೋಧಿಸಿ ಇಂದಿನ ರಾಜಕೀಯ ಸ್ಥಿತಿಗತಿಗಳ ಭಾಗವಾಗಿ ತಾನು ಪ್ರಚಾರದ ವೇಳೆ ಮೋದಿ ಸರ್ಕಾರದ ವಿರುದ್ಧ ಆ ಪದವನ್ನು ಬಳಸಿದ್ದೇನೆ. ಚುನಾವಣಾ ಆಯೋಗ ತಮ್ಮ ಮೇಲಿನ ದೂರನ್ನು ವಜಾಗೊಳಿಸಿ ಇದರಲ್ಲಿ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ಮನವಿ ಮಾಡಿದ್ದಾರೆ.
ತಮ್ಮ ಹೇಳಿಕೆಗೆ ಪುಷ್ಠಿ ನೀಡುವ ಹಲವು ದಾಖಲೆಗಳನ್ನು ಸಹ ರಾಹುಲ್ ಗಾಂಧಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಕಳೆದ ತಿಂಗಳು ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ನರೇಂದ್ರ ಮೋದಿಯವರು ಬುಡಕಟ್ಟು ಜನಾಂಗದ ವಿರೋಧಿಯಾಗಿದ್ದಾರೆ. ಹೊಸ ಕಾನೂನನ್ನು ಕೇಂದ್ರ ಸರ್ಕಾರ ಹೊರತಂದಿದ್ದು, ಅದರ ಅನ್ವಯ ಪೊಲೀಸರು ಬುಡಕಟ್ಟು ಸಮುದಾಯದ ಜನರ ಮೇಲೆ ಗುಂಡು ಹಾರಿಸಬಹುದು, ಅಲ್ಲದೆ ಜನಾಂಗದವರು ವಾಸವಾಗಿರುವ ಭೂಮಿ, ಅರಣ್ಯ, ಬಳಸುವ ನೀರು ಎಲ್ಲವನ್ನೂ ವಶಪಡಿಸಿಕೊಳ್ಳಬಹುದು ಎಂದು ಹೇಳಿದ್ದರು.
SCROLL FOR NEXT