ನಾನು 'ಜೈ ಶ್ರೀರಾಮ್' ಹೇಳುತ್ತೇನೆ, ತಾಕತ್ತಿದ್ದರೆ ಬಂಧಿಸಿ: ಮಮತಾಗೆ ಅಮಿತ್ ಶಾ ಸವಾಲು
ನಾನೂ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ....
ಕನ್ನಿಂಗ್: ನಾನೂ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬೆನರ್ಜಿ ಅವರು ಸೋಮವಾರ ಸವಾಲು ಹಾಕಿದ್ದಾರೆ.
ಇಂದು ಕನ್ನಿಂಗ್ ನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು, ಟಿಎಂಸಿ ಅಧ್ಯಕ್ಷೆ ನಾನು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ್ಯಾಲಿ ನಡೆಸುವುದನ್ನು ತಡೆಯಬಹುದು. ಆದರೆ ಬಿಜೆಪಿಯ ಗೆಲುವಿನ ರ್ಯಾಲಿ ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಯಾರಾದರೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದರೆ ಮಮತಾ ಬ್ಯಾನರ್ಜಿಗೆ ಕೋಪ ಬರುತ್ತದೆ. ನಾನು ಇಂದು, ಇಲ್ಲಿಯೇ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತೇನೆ. ನಿಮಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಿ. ನಾಳೆ ನಾನು ಕೋಲ್ಕತಾಗೆ ಬರುತ್ತೇನೆ ಎಂದರು.
ಬರೈಪುರದಲ್ಲಿ ತಮ್ಮ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಅನುಮತಿ ನಿರಾಕರಿಸಿದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅಮಿತ್ ಶಾ, ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಕಣ್ಮರೆಯಾಗಿದ್ದು, ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಮಮತಾ ಬ್ಯಾನರ್ಜಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಮುಖಂಡರಿಗೆ ಚುನಾವಣಾ ಪ್ರಚಾರ ನಡೆಸಲು ಅವಕಾಶ ಕಲ್ಪಿಸದಿದ್ದರೆ ಮತ್ಯಾವ ಪುರುಷಾರ್ಥಕ್ಕೆ ಚುನಾವಣೆ ನಡೆಸಬೇಕು ಎಂದು ಪ್ರಶ್ನಿಸಿದರು.