ದೇಶ

ಚುನಾವಣೋತ್ತರ ಸಮೀಕ್ಷೆಗಳು ಗಾಸಿಪ್ ಇದ್ದಂತೆ, ನಂಬಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

Srinivasamurthy VN
ಕೋಲ್ಕತಾ: ಚುನಾವಣೋತ್ತರ ಸಮೀಕ್ಷೆಗಳ ಕುರಿತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪರೋಕ್ಷ ಕಿಡಿಕಾರಿದ್ದು, ಚುನಾವಣೋತ್ತರ ಸಮೀಕ್ಷೆಗಳು ಗಾಸಿಪ್ ಇದ್ದಂತೆ, ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಅತ್ತ 7ನೇ ಹಂತದ ಮತದಾನ ಮುಕ್ತಾಯ ಬೆನ್ನಲ್ಲೇ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಚುನಾವಣೋತ್ತರ ಸಮೀಕ್ಷೆಗಳಿಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, 'ಮೋದಿ ಮತ್ತು ಶಾ ತಂಡ ಚುನಾವಣೆಯಲ್ಲಿ ಬಳಿಸಿದ್ದ ತಮ್ಮ ಕುತಂತ್ರವನ್ನೇ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಬಳಿಸಿರುವ ಸಾಧ್ಯತೆ ಇದೆ. ಚುನಾವಣೋತ್ತರ ಸಮೀಕ್ಷೆಗಳನ್ನು ತಮ್ಮ ಪರ ಮಾಡಿಕೊಂಡು ಈ ಗ್ಯಾಪ್ ನಲ್ಲಿ ಇವಿಎಂಗಳನ್ನು ತಿರುಚುವ ಅಥವಾ ಬದಲಿ ಇವಿಎಂಗಳನ್ನು ಸೇರಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ನಾವು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
ಅಂತೆಯೇ ನಾನು ಯಾವುದೇ ರೀತಿಯ ಚುನಾವಣೋತ್ತರ ಸಮೀಕ್ಷೆಗಳನ್ನು ನಂಬುವುದಿಲ್ಲ. ಒಂದು ಸಮೀಕ್ಷೆಗಳು ನಮ್ಮ ಪರವಾಗಿ ಬಂದರೂ ನಾನು ಅವನ್ನು ನಂಬುವುದಿಲ್ಲ. ನಾವು ಈ ಹೋರಾಟವನ್ನು ಒಟ್ಟಾಗಿ ನಡೆಸಿದ್ದು, ಫಲಿತಾಂಶ ಹೇಗೇ ಬಂದರೂ ಒಟ್ಟಾಗಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಇಂದು ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿ ಪ್ರಾಬಲ್ಯ ಕುಸಿದಿರುವ ಕುರಿತು ಸಮೀಕ್ಷೆಗಳು ಹೇಳಿವೆ. ಇಲ್ಲಿ ಬಿಜೆಪಿ ತನ್ನ ಶಕ್ತಿ ಹೆಚ್ಚಿಸಿಕೊಂಡಿದ್ದು, ಬಂಗಾಳದಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಕೂಟ 16 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದು, ಟಿಎಂಸಿ 24 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಟಿಎಂಸಿ ಮಿತ್ರಪಕ್ಷ ಕಾಂಗ್ರೆಸ್ ನ ಸಾಧನೆ ಇಲ್ಲಿ ಶೂನ್ಯ ಎಂದು ಹೇಳಲಾಗಿದೆ.
SCROLL FOR NEXT