ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ ಇದ್ದು, ಈ ಹಂತದಲ್ಲಿ ಟಿವಿ ವಾಹಿನಿಗಳಿಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ.
ಅದರಂತೆ ಎಲ್ಲ ಖಾಸಗಿ ವಾಹಿನಿಗಳೂ 2011ರ ಮಾರ್ಗದರ್ಶಿ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೋರಲಾಗಿದ್ದು, ಸಂಬಂಧ ಪಟ್ಟ ವಾಹಿನಿಗಳು ಮಾತ್ರ ಫಲಿತಾಂಶ ಪ್ರಕಟಣೆ ಪ್ರಸಾರ ಮಾಡಬಹುದು ಎಂದು ಇಲಾಖೆ ಸ್ಪಷ್ಟ ಪಡಿಸಿದೆ. ಇದಕ್ಕಾಗಿ ಇಲಾಖೆ ವಾಹಿನಿಗಳನ್ನು 2 ವಿಭಾಗವಾಗಿ ವಿಂಗಡಿಸಿದ್ದು, ಅದರಂತೆ ವಾಹಿನಿಹಗಳ ನೊಂದಾವಣಿ ಆಧಾರದ ಮೇಲೆ ಅವುಗಳಿಗೆ ಚುನಾವಣಾ ಫಲಿತಾಂಶ ಪ್ರಸಾರಕ್ಕೆ ಅನುಮತಿ ನೀಡಲಾಗಿದೆ.
ಅಂದರೆ ನೋಂದಾವಣಿ ಸಂದರ್ಭದಲ್ಲಿ ಯಾವೆಲ್ಲಾ ವಾಹಿನಿಗಳು ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ ವಿಭಾಗದಲ್ಲಿ ನೊಂದಾಯಿಸಿಕೊಂಡಿವೆಯೇ ಅಂತಹ ವಾಹಿನಿಗಳಿಗೆ ಮಾತ್ರ ಚುನಾವಣಾ ಫಲಿತಾಂಶ ಪ್ರಕಟಣೆಗೆ ಅವಕಾಶ ಕೊಡಲಾಗಿದೆ. ಅಂತೆಯೇ ಮನರಂಜನೆ ವಿಭಾಗದಲ್ಲಿ ನೊಂದಾಯಿಸಿಕೊಂಡಿರುವ ವಾಹಿನಿಗಳು ಫಲಿತಾಂಶ ಪ್ರಸಾರ ಮಾಡಬಾರದು ಎಂದು ಸೂಚಿಸಲಾಗಿದೆ. ಅಂತೆಯೇ ಈ ನಿಯವನ್ನು ವಾಹಿನಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರಲಾಗಿದೆ.
ಮನರಂಜನೆ ವಿಭಾಗದಲ್ಲಿ ನೊಂದಾಯಿಸಿಕೊಂಡಿರುವ ಯಾವುದೇ ವಾಹಿನಿಗಳೂ ಚುನಾವಣೆ ಫಲಿತಾಂಶ ಕುರಿತು ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಸೂಚಿಸಲಾಗಿದೆ.