ಕರ್ನಾಟಕ

ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಎ.ಮಂಜು ಪುತ್ರ ಮಂಥರ್ ಗೌಡ ವಜಾ

Lingaraj Badiger
ಹಾಸನ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಚಿವ ಎ.ಮಂಜು ಅವರ ಪುತ್ರ ಮಂಥರ್ ಗೌಡ ಅವರನ್ನು ಹಾಸನ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಕೆಪಿಸಿಸಿ ಯುವ ಘಟಕದ ನೂತನ ಉಪಾಧ್ಯಕ್ಷ ಕೆಂಪರಾಜು ಆದೇಶ ಹೊರಡಿಸಿದ್ದಾರೆ.
ಎ.ಮಂಜು ಬಿಜೆಪಿಗೆ ಪಕ್ಷಾಂತರ ಮಾಡಿದ್ದರೂ ಕೂಡ ಮಂಥರ್ ಗೌಡ ಕಾಂಗ್ರೆಸ್ ಪಕ್ಷದಲ್ಲೇ ಉಳಿದಿದ್ದರು. ಆದರೆ ಮೈತ್ರಿ ಧರ್ಮಕ್ಕೆ ನ್ಯಾಯ ದೊರಕಿಸಿ ಕೊಡುತ್ತಾರೆ ಎಂಬ ನಂಬಿಕೆಯಿಲ್ಲ. ಹೀಗಾಗಿ ಅವರನ್ನು ಕಾಂಗ್ರೆಸ್ ಯುವ ಘಟಕದ ಕಾರ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ.
ಹಾಸನ  ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರಾಗಿರುವ ಮಂಥರ್ ಗೌಡ ಅವರು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರು ಆಗಿದ್ದರು. ಮಂಥರ್ ಅವರನ್ನು ಕೆಪಿಸಿಸಿ ವಜಾಗೊಳಿಸಿದ ಪರಿಣಾಮ ಯುವ ಕಾಂಗ್ರೆಸ್  ಕಾರ್ಯಾಧ್ಯಕ್ಷ ಸ್ಥಾನವನ್ನು ಮಾಜಿ ಸಚಿವ ಹಾಸನ ಜಿಲ್ಲಾ ಪ್ರಭಾವಿ ಕಾಂಗ್ರೆಸ್ ನಾಯಕ ಬಿ.ಶಿವರಾಂ ಪುತ್ರ ಸುಜನ್ ಗೌಡ ಗಿಟ್ಟಿಸಿಕೊಂಡಿದ್ದಾರೆ.
ಕಾರ್ಯಾಧ್ಯಕ್ಷ ಸ್ಥಾನದಿಂದ ಮಂಥರ್ ಅವರನ್ನು ವಜಾಗೊಳಿಸುವ ಮುನ್ನ ಚುಣಾವಣೆಯಲ್ಲಿ ಯುವ ಕಾಂಗ್ರೆಸ್  ನಿಂದ ಯಾವ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಾಗಿದೆ. ಅಭ್ಯರ್ಥಿ ಪರ ಯಾವೆಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೈತ್ರಿ ಅಭ್ಯರ್ಥಿ ಪರ ಚುನಾವಣೆಯಲ್ಲಿ ಸಕ್ರಿಯವಾಗಿ ಪ್ರಚಾರ ಕೈಗೊಳ್ಳದ ಬಗ್ಗೆ ವಿವರಣೆ ನೀಡುವಂತೆ ಕಾಂಗ್ರೆಸ್ ಯುವ ಘಟದ ಕಾರ್ಯದರ್ಶಿ ಅವರು ಮಂಥರ್ ಗೌಡಗೆ ನೋಟಿಸ್ ಜಾರಿ ಮಾಡಿದ್ದರು. 
ನೋಟಿಸ್ ಗೆ ಯಾವುದೇ ಉತ್ತರ ನೀಡದ ಹಿನ್ನಲೆಯಲ್ಲಿ ವಜಾಗೊಳಿಸುವ ಮೂಲಕ ಎ.ಮಂಜು ಪಕ್ಷ ತೊರೆದ ಬೇಸರವನ್ನು ಮಗನ ಮೇಲೆ ಕಾಂಗ್ರೆಸ್ ಘಟಕ ತೀರಿಸಿಕೊಂಡಿದೆ ಎನ್ನಲಾಗಿದೆ.
SCROLL FOR NEXT