ಕರ್ನಾಟಕ

ಬಿಸಿಲಿಗೆ ಭಯಪಟ್ಟು ಕೆಳಗೆ ಇಳಿದಿಲ್ಲ: ಮಾಧ್ಯಮಗಳ ನೀರಿಳಿಸಿದ ಉಪೇಂದ್ರ

Srinivasamurthy VN
ಚಿತ್ರದುರ್ಗ: ನಾವು ರ್ಯಾಲಿ ಮಾಡಿ ಜನರಿಗೆ ತೊಂದರೆ ಕೊಡುವುದು ಇಷ್ಟವಿಲ್ಲ, ಹೀಗಾಗಿ ಎರಡು ಮಾತಾಡಿ ಗಾಡಿಯಿಂದ ಕೆಳಗೆ ಇಳಿದೆ. ಬಿಸಿಲಿಗೆ ಭಯಪಟ್ಟು ಅಲ್ಲ ಎಂದು ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹೇಳಿದ್ದಾರೆ.
ನಿನ್ನೆ ಚಿತ್ರದುರ್ಗದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ಉಪೇಂದ್ರ ಅವರು, ಎತ್ತಿನ ಗಾಡಿಯಲ್ಲಿ ನಿಂತು ಎರಡು ನಿಮಿಷ ಮಾತನಾಡಿ ಅಲ್ಲಿಂದ ಕೆಳಗೆ ಇಳಿದಿದ್ದರು. ಈ ಕುರಿತು ಕೆಲ ಮಾಧ್ಯಮಗಳು ವರದಿ ಮಾಡಿ ಉಪೇಂದ್ರ ಬಿಸಿಲಿನ ತಾಪ ತಡೆಯಲಾರದೇ ಉಪೇಂದ್ರ ತಮ್ಮ ಭಾಷಣ ಮೊಟಕುಗೊಳಿಸಿ ಕಾರು ಹತ್ತಿದ್ದಾರೆ ಎಂದು ವರದಿ ಮಾಡಿದ್ದವು.
ಈ ಕುರಿತು ತಮ್ಮ ಟ್ವಿಟರ್ ನಲ್ಲಿ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಉಪೇಂದ್ರ ಅವರು, 'ನಾವು ರ್ಯಾಲಿ ಮಾಡಿ ಜನರಿಗೆ ತೊಂದರೆ ಕೊಡುವುದಿಲ್ಲ. ಇದು ಪ್ರಜಾಪ್ರಭುತ್ವದ ವಿಚಾರಗಳ ಪ್ರಚಾರ ಎಂದು ಹೇಳುತ್ತಲೇ ಬಂದಿದ್ದೇವೆ. ಆದರೂ ಕೆಲವು ಅಭ್ಯರ್ಥಿಗಳು ತಿಳಿಯದೇ ಗಾಡಿ ರೆಡಿ ಮಾಡಿಕೊಂಡಿದ್ದರು. ಎರಡು ಮಾತಾಡಿ ಎಂದಿದ್ದಕ್ಕೆ ಗಾಡಿ ಹತ್ತಿ ಎರಡು ಮಾತಾಡಿ ಕೆಳಗೆ ಇಳಿದೆ... ಬಿಸಿಲಿಗೆ ಭಯ ಪಟ್ಟು ಅಲ್ಲ ಎಂದು ಹೇಳಿದ್ದಾರೆ.
ಅಂತೆಯೇ 'ಪ್ರಜಾಕೀಯದಲ್ಲಿ ಗೆಲ್ಲಬೇಕಿರುವುದು ಪ್ರಜೆಗಳು. ಇಲ್ಲಿರುವ ಅಭ್ಯರ್ಥಿಗಳಿಗೆ ಸೋಲು ಗೆಲ್ಲುವ ಆತಂಕವೇ ಇರಬಾರದು. ಪ್ರಜೆಗಳು ಗೆದ್ದರೆ ನಮಗೆ ಕೆಲಸ! ಇಲ್ಲದಿದ್ದರೆ ಆತ್ಮ ತ್ರಪ್ತಿ!! ಇದಕ್ಕಿನ್ನಾ ಇನ್ನೇನು ಬೇಕು.. ಎಂದು ಹೇಳಿದ್ದಾರೆ.
ಅಂತೆಯೇ ಮತ್ತೆ ರಾಜಕೀಯ ವ್ಯವಸ್ಥೆ ಕುರಿತು ಟೀಕಿಸಿರುವ ಉಪೇಂದ್ರ, 'ಸಾವಿರಾರು ಸರ್ಕಾರಿ ಕೆಲಸಗಾರರಿಗೆ, ಅಧಿಕಾರಿಗಳಿಗೆ, ಶಾಸಕರು - ಸಂಸದರಿಗೆ & ಮಂತ್ರಿಗಳಿಗೆ ಸಂಬಳ, ಎಸಿ ಕಾರು ಅಫೀಸ್ ಕೊಟ್ಟ ಯಜಮಾನ ಟ್ರಾಫಿಕ್ ನಲ್ಲಿ ಸಿಕ್ಕಿ ಒದ್ದಾಡಿ... ಕೆಲಸಗಾರರಿಗೆ ಜೀರೋ ಟ್ರಾಫಿಕ್ ಮಾಡಿಕೊಟ್ಟು ಅರಮನೆಗೆ ಬೀಳ್ಕೊಡುವ ವ್ಯವಸ್ಥೆಯೇ ರಾಜಕೀಯ!!' ಎಂದು ಹೇಳಿದ್ದಾರೆ.
SCROLL FOR NEXT