ನಿಖಿಲ್ ಎಲ್ಲಿದ್ದೀಯಪ್ಪ ಡ್ಯಾನ್ಸಿಂಗ್ ಟ್ರೋಲ್
ಬೆಂಗಳೂರು: ಹಾಲಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕಣ ರಂಗೇರಿದ ಬೆನ್ನಲ್ಲೇ ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಟ್ರೋಲ್ ಕೂಡ ವೈರಲ್ ಆಗಿದೆ. ಇದೀಗ ಮತ್ತೊಂದು ಸೇರ್ಪಡೆ ಎಂಬಂತೆ ಇದೇ ನಿಖಿಲ್ ಎಲ್ಲಿದ್ದೀಯಪ್ಪ ಎಂಬ ಡ್ಯಾನ್ಸಿಂಗ್ ಟ್ರೋಲ್ ಕೂಡ ಶುರುವಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಚಿತ್ರದ ಧ್ವನಿಸುರುಳಿ ಬಿಡುಗಡೆಯ ಕಾರ್ಯಕ್ರಮದಲ್ಲಿ ನಡೆದ ಸಂಭಾಷಣೆಯನ್ನೇ ಬಳಸಿ ಈ ಹಿಂದೆ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. ಆದರೆ ಈ ಬಾರಿ ಒಂದಷ್ಟು ವಿಭಿನ್ನವಾಗಿ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಹೌದು.. ನಿಖಿಲ್ ಎಲ್ಲಿದ್ದೀಯಪ್ಪಾ ಟ್ರೋಲ್ ನಿಲ್ಲುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಈ ಸಂವಾದದ ಆಡಿಯೋ ತುಣುಕನ್ನು ಬಳಸಿ ಇದೀಗ ಇಬ್ಬರು ಯುವತಿಯರು ಸಖತ್ ಡ್ಯಾನ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಾರೆ.
ಜಾಗ್ವಾರ್ ಸಿನಿಮಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ವೇದಿಕೆಯಲ್ಲಿ ನಿಂತು ಮಗನನ್ನು 'ನಿಖಿಲ್ ಎಲ್ಲಿದ್ದೀಯಪ್ಪಾ' ಎಂದು ಕರೆದಿದ್ದರು. ಇದೇ ವೇಳೆ ವೇದಿಕೆಯಿಂದ ದೂರದಲ್ಲಿದ್ದ ನಿಖಿಲ್ ಕುಮಾರಸ್ವಾಮಿ 'ನಿಮ್ಮನ್ನು ಮತ್ತು ನಮ್ಮ ತಾತನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಜನಗಳ ಮಧ್ಯೆ ಇದ್ದೀನಿ ಅಪ್ಪ' ಎಂದು ಉತ್ತರ ನೀಡಿದ್ದರು. ಈ ಸಂಭಾಷಣೆಯ ಆಡಿಯೋವನ್ನು ಬಳಸಿ ವಿದ್ಯಾರ್ಥಿನಿಯರು ಡ್ಯಾನ್ಸಿಂಗ್ ಟ್ರೋಲ್ ಮಾಡಿದ್ದಾರೆ ಇಬ್ಬರು ವಿದ್ಯಾರ್ಥಿನಿಯರು. ನಂಜನಗೂಡಿನ ಕಾಲೇಜೊಂದರ ಯುವತಿಯರು ವೇದಿಕೆಯ ಮೇಲೆ ನೃತ್ಯ ಮಾಡುವಾಗ 'ನಿಖಿಲ್ ಎಲ್ಲಿದ್ದೀಯಪ್ಪ' ಎಂಬ ಸಂಭಾಷಣೆ ಎದುರಾಗುತ್ತದೆ. ಇದೇ ವೇಳೆ ಮತ್ತೊಬ್ಬ ವಿದ್ಯಾರ್ಥಿ ದೂರದಲ್ಲಿ ನಿಂತು ನಿಖಿಲ್ ಹೇಳಿದ ಡೈಲಾಗ್ ಗೆ ನೃತ್ಯ ಮಾಡುತ್ತಾನೆ. ಈ ಸಂಭಾಷಣೆ ಮುಗಿಯುತ್ತಿದ್ದಂತೆ ಬರೀ ಓಳು ಬರೀ ಓಳು.. ಎಂಬ ಉಪೇಂದ್ರ ಚಿತ್ರದ ಹಾಡು ಕೂಡ ಆರಂಭವಾಗುತ್ತದೆ.
ಈ ವೇಳೆ ವಿದ್ಯಾರ್ಥಿನಿಯರು ನೃತ್ಯವನ್ನು ಮುಂದುವರೆಸುತ್ತಾರೆ. ಈ ಹ್ಯಾಸ್ಯಭರಿತ ಡ್ಯಾನ್ಸ್ ಅನ್ನು ನೋಡಿ ನೆರೆದಿದ್ದವರು ನಗೆಗಡಲಲ್ಲಿ ತೇಲಿದ್ದರು. ಈ ನೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮತ್ತೆ ನಿಖಿಲ್ ಎಲ್ಲಿದ್ದೀಯಪ್ಪಾ ಸದ್ದು ಮಾಡುತ್ತಿದೆ. ಅದರಲ್ಲೂ ಹಾಡಿನೊಂದಿಗೆ ಆಡಿಯೋ ಎಡಿಟ್ ಮಾಡಿರುವ ಕ್ರಿಯೇಟಿವಿಟಿಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.