ಬೆಳಗಾವಿ: ಬಿಜೆಪಿಯ ಸ್ಟಾರ್ ಪ್ರಚಾರಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ ವಾರ ಮುಂಬೈ-ಕರ್ನಾಟಕ ಭಾಗದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಏಳು ಲೋಕಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಪ್ರಧಾನಿಯವರು ಚಿಕ್ಕೋಡಿಯಲ್ಲಿ ಏಪ್ರಿಲ್ 18ರಂದು, ಯೋಗಿ ಆದಿತ್ಯನಾಥ್ ಬೆಳಗಾವಿಯ ಶಹಪುರದ ಮಾಲಿನಿ ಗ್ರೌಂಡ್ ನಲ್ಲಿ ಏಪ್ರಿಲ್ 17ರಂದು ಪ್ರಚಾರ ನಡೆಸಲಿದ್ದಾರೆ.
ಚಿಕ್ಕೋಡಿಗೆ ಮೋದಿಯವರು ಅಂದು ಅಪರಾಹ್ನ 3.30ಕ್ಕೆ ಆಗಮಿಸಲಿದ್ದಾರೆ. ಇದಕ್ಕೂ ಮುನ್ನ ಅವರು ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಉತ್ತೇಜನ ನೀಡಲು ಪ್ರಧಾನಿಯವರ ಪ್ರಚಾರ ಇರುತ್ತದೆ.
ಈ ಬಗ್ಗೆ ನಿನ್ನೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಬಿಜೆಪಿ ಹಿರಿಯ ನಾಯಕ ಇರಾನ್ನ ಕಡಾಡಿ, ರಾಜ್ಯದಿಂದ ಬಿಜೆಪಿ ನಾಯಕಿ ತಾರಾ ಇಂದು ಬಾಗೇವಾಡಿ ಮತ್ತು ಸೌದತ್ತಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ನಾಳೆ ಗೋಕಾಕ್ ನ ವಾಲ್ಮೀಕಿ ಗ್ರೌಂಡ್ ನಲ್ಲಿ ಮತ್ತು ಮಧ್ಯಾಹ್ನ ಬೈಲಹೊಂಗಲದಲ್ಲಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.