ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ
ಚಿಕ್ಕಮಗಳೂರು: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಜ್ಜನ, ಸೌಮ್ಯ ವ್ಯಕ್ತಿತ್ವ ಹೊಂದಿರುವವರು. ಅವರ ಒಳ್ಳೆಯ ಗುಣದಿಂದಾಗಿಯೇ ಪಾಕ್ ಸೇನೆಗೆ ಸಿಕ್ಕಿಬಿದ್ದ ಭಾರತದ ಪೈಲಟ್ ಅಭಿನಂದನ್ ವರ್ಥಮಾನ್ ಅವರನ್ನು ಸುರಕ್ಷಿತವಾಗಿ ವಾಪಸ್ ಕಳಿಸಿದ್ದಾರೆ ಎಂದು ಶೃಂಗೇರಿಯ ಕಾಂಗ್ರೆಸ್ ಶಾಸಕ ಟಿ ಡಿ ರಾಜೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರು ನಿನ್ನೆ ಚಿಕ್ಕಮಗಳೂರಿನ ಎನ್ ಆರ್ ಪುರ ತಾಲ್ಲೂಕಿನ ಮೆಣಸೂರಿನಲ್ಲಿ ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡುವ ಸಂದರ್ಭದಲ್ಲಿ ಮಾತನಾಡಿ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಯದಿಂದ ಭಾರತದ ಪೈಲಟ್ ನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಲ್ಲ, ಬದಲಿಗೆ ಸೌಜನ್ಯಕ್ಕೆ ಎಂದರು. ಇನ್ನು ಪ್ರಧಾನಿ ಮೋದಿಯನ್ನ ಟೀಕಿಸುವ ಭರದಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್‍ರನ್ನ ಹಾಡಿ ಹೊಗಳಿದ್ದಾರೆ. ಇದರಿಂದ ರಾಜೇಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಗೋವಾದಿಂದ 2 ಬಾಟಲಿ ವಿಸ್ಕಿ ತಂದರೆ ದಂಡ ಹಾಕುತ್ತಾರೆ. 350 ಕೆ.ಜಿ. ಆರ್.ಡಿ.ಎಕ್ಸ್ ನ ಜೀಪಿನಲ್ಲಿ ತಂದು ಸೈನಿಕರ ಬಸ್ಸಿಗೆ ಗುದ್ದಿ ಸೈನಿಕರ ಹತ್ಯೆ ಮಾಡುತ್ತಾರೆ. ಮೋದಿಯವರೆ ಆಗ ಎಲ್ಲೋಗಿತ್ತು ನಿಮ್ಮ 56 ಇಂಚಿನ ಎದೆ, ನಿಮ್ಮ ಶೌರ್ಯ ಎಂದು ಮೋದಿಯನ್ನ ಟೀಕಿಸಿದ್ದಾರೆ. ಮೋದಿ ನೋಡಿ ಪಾಕಿಸ್ತಾನ ಹೆದರಲ್ಲ. ನಮ್ಮ ದೇಶದ ಜನ, ಸೈನಿಕರು ಹಾಗೂ ಭಾವನೆಗಳಿಗೆ ಬೇರೆ ದೇಶಗಳು ಬೆಲೆ ಕೊಡುತ್ತಿವೆ ಎಂದು ಹೇಳಿದ್ದಾರೆ.