ಕೊನೆಗೂ ಸಿದ್ದರಾಮಯ್ಯ ಮಂಡ್ಯಕ್ಕೆ ಆಗಮನ; ಇಂದು ದೇವೇಗೌಡರ ಜೊತೆ ಮತಯಾಚನೆ
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕರ್ನಾಟಕದಲ್ಲಿ ಇನ್ನು ಕೆಲವೇ ದಿನಗಳು ಬಾಕಿಯಷ್ಟೆ...
ಮಂಡ್ಯ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕರ್ನಾಟಕದಲ್ಲಿ ಇನ್ನು ಕೆಲವೇ ದಿನಗಳು ಬಾಕಿಯಷ್ಟೆ. ಚುನಾವಣಾ ಕಣ ಕಾವೇರುತ್ತಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಿನೇದಿನೇ ಪ್ರಚಾರದ ರಂಗು, ಆರೋಪ, ಪ್ರತ್ಯಾರೋಪಗಳು ಹೆಚ್ಚಾಗುತ್ತಿವೆ. ಕಾಂಗ್ರೆಸ್-ಜೆಡಿಎಸ್ ನಿಖಿಲ್ ಗೆಲ್ಲಿಸಲು ಮೈತ್ರಿ ನಾಯಕರು ಶತಪ್ರಯತ್ನ ನಡೆಸುತ್ತಿದ್ದಾರೆ.
ಮಾಜಿ ಸಿಎಂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರನ್ನು ಮಂಡ್ಯ ಪ್ರಚಾರಕ್ಕೆ ಕರೆತರಲು ಹೆಚ್ ಡಿ ದೇವೇಗೌಡ ಆದಿಯಾಗಿ ನಿಖಿಲ್ ಕುಮಾರಸ್ವಾಮಿಯವರೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಕೊನೆಗೂ ಸಕ್ಕರೆ ನಾಡಿಗೆ ಬಂದು ತಮ್ಮ ಅಭ್ಯರ್ಥಿಯ ಪರ ಪ್ರಚಾರ ಮಾಡಲು ಮನಸ್ಸು ತೋರಿದ್ದಾರೆ ಸಿದ್ದರಾಮಯ್ಯನವರು. ಇದರ ಭಾಗವಾಗಿ ಇಂದು ಗುರು- ಎಚ್ಡಿ ದೇವೇಗೌಡ ಸಿದ್ದರಾಮಯ್ಯ ಅವರು ನಿಖಿಲ್ ಪರ ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ ನಾಗಮಂಗಲಕ್ಕೆ ದೇವೇಗೌಡ ಹಾಗೂ ಸಿದ್ದರಾಮಯ್ಯ ಒಂದೇ ಹೆಲಿಕ್ಯಾಪ್ಟರ್ನಲ್ಲಿ ಆಗಮಿಸಿ ಅಪರಾಹ್ನ ಮಳವಳ್ಳಿಯ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ ಹೊಳಲು ಸಾರ್ವಜನಿಕ ಸಭೆಯಲ್ಲಿ ಉಭಯ ನಾಯಕರು ಸೇರಿ ಮಂಡ್ಯದ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಹಾಗೂ ಮೈಸೂರು ಅಭ್ಯರ್ಥಿ ವಿಜಯ್ ಶಂಕರ್ ಪರ ದೋಸ್ತಿ ನಾಯಕರು ಮತಯಾಚನೆ ಮಾಡಲಿದ್ದಾರೆ.