ವಿಜಯಪುರ: ಲೋಕಸಭಾ ಚುನಾವಣೆ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ನಿರುದ್ಯೋಗಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಭವಿಷ್ಯ ನುಡಿದಿದ್ದಾರೆ.
ಎರಡು ಹೊತ್ತಿನ ಊಟಕ್ಕೆ ಗತಿ ಇಲ್ಲದವರು ಸೇನೆಗೆ ಸೇರುತ್ತಾರೆ ಎಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾದ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಬಿ.ಎಲ್. ಸಂತೋಷ್ , ಚುನಾವಣೆಯಲ್ಲಿ ನಿಖಿಲ್ ಗೆಲ್ಲಲ್ಲ, ಅವರು ಮಾಡುವ ಸಿನಿಮಾ ಓಡಲ್ಲ, ಮೇ 23ರ ನಂತರ ನಿಖಿಲ್ ನಿರುದ್ಯೋಗಿ ಆಗೋದು ಗ್ಯಾರಂಟಿ. ಆಗ ಕುಮಾರಸ್ವಾಮಿ ನಿಖಿಲ್ ನನ್ನು ಸೇನೆಗೆ ಸೇರಿಸಲಿ ಅಲ್ಲಿನ ಪರಿಸ್ಥಿತಿ ಹೇಗಿರುತ್ತೆ ಅನ್ನೋದು ಗೊತ್ತಾಗುತ್ತದೆ ಎಂದು ಸವಾಲ್ ಹಾಕಿದ್ದಾರೆ.
ನಮ್ಮ ಶತ್ರುಗಳು ಯಾವತ್ತೂ ಶತ್ರುಗಳ ಗುಂಡಿಗೆ ಬೆನ್ನು ಕೊಟ್ಟಿಲ್ಲ, ಬೆನ್ನಿಗೆ ಗುಂಡು ಬಿದ್ದು ಹುತಾತ್ಮರಾದ ಉದಾಹರಣೆ ಇಲ್ಲ. ಸೈನಿಕರು ಗುಂಡಿಗೆ ಎದೆಯೊಡ್ಡಿದ್ದಾರೆ. ಭಾರತೀಯ ಸೈನಿಕರ ಬಗ್ಗೆ ದೇಶವೇ ಗೌರವ ನೀಡುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಯೋಧರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ ಎಂದು ಬಿಎಲ್ ಸಂತೋಷ್ ಕಿಡಿಕಾರಿದ್ದಾರೆ.