ಮಂಡ್ಯ: ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡ ಪುತ್ರ ಚೇತನ್ ಗೌಡ ಮತ್ತು ಜೆಡಿಎಸ್ ಮಾಜಿ ಕಾರ್ಯಕರ್ತ ಪಿ. ರಮೇಶ್ ಎಂಬುವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಶತಾಯಗತಾಯ ಮಂಡ್ಯದಲ್ಲಿ ಸ್ವತಂತ್ರ್ಯ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಸೋಲಿಸಲೇಬೇಕು ಅದಕ್ಕಾಗಿ 150 ಕೋಟಿ ರುಪಾಯಿ ಹಣ ಮೀಸಲಿಟ್ಟಿರುವುದಾಗಿ ಹೇಳಿರುವ ಆಡಿಯೋ ಸಂಭಾಷಣೆ ಇದೀಗ ವೈರಲ್ ಆಗಿದೆ.
ಇದಕ್ಕೆ ಬೂತ್ ಮಟ್ಟದಲ್ಲಿ 5 ಲಕ್ಷ ರುಪಾಯಿ ಮೀಸಲಿಟ್ಟಿರುವ ಬಗ್ಗೆ ಮಾತನಾಡಲಾಗಿದೆ. ಅಲ್ಲದೆ ಇತ್ತೀಚೆಗೆ ಮಂಡ್ಯದಲ್ಲಿ ನಡೆಯುತ್ತಿರುವ ಪ್ರಚಾರದ ವೇಳೆ ಸ್ಪರ್ಧಿ-ಪ್ರತಿಸ್ಪರ್ಧಿ ಆರೋಪ-ಪ್ರತ್ಯಾರೋಪಗಳ ಕುರಿತು ಸಹ ಚರ್ಚೆ ನಡೆಸಲಾಗಿದೆ ಎನ್ನುವ ವಿಷಯವನ್ನು ಮಾಧ್ಯಮಗಳು ವರದಿ ಮಾಡಿವೆ.
ಏಪ್ರಿಲ್ 18ರಂದು ಮಂಡ್ಯ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಂಡು ಬರಬೇಕು ಎಂಬ ಒತ್ತಡದಲ್ಲಿದ್ದಾರೆ.
ಈ ಮಧ್ಯೆ ಮಂಡ್ಯಗಾಗಿ 150 ಕೋಟಿ ರುಪಾಯಿ ಖರ್ಚು ಮಾಡಲಾಗುತ್ತದೆ ಎಂಬ ಆಡಿಯೋ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ಸಂಸದ ಎಲ್ಆರ್ ಶಿವರಾಮೇಗೌಡ ಅವರು, ಇದು ಫೇಕ್ ಆಡಿಯೋ. ಇದರಲ್ಲಿ ಯಾವುದು ಉರುಳಿಲ್ಲ. ಯಾರೋ ದುರುದ್ದೇಶದಿಂದ ಈ ಆಡಿಯೋವನ್ನು ಬಿಡುಗಡೆ ಮಾಡಲಾಗಿದೆ. ನನ್ನ ಮಗ ಎರಡು ಮೂರು ದಿನಗಳಿಂದ ನನ್ನ ಕೈಗೆ ಸಿಗುತ್ತಿಲ್ಲ. ಅವನು ಈ ರೀತಿ ಮಾಡಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಪಕ್ಷೇತ್ತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು, ನನಗೆ ಮುಂಚಿನಿಂದಲೂ ಅನುಮಾನ ಇತ್ತು. ಮಂಡ್ಯದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಪ್ರತಿಯೊಂದು ಬೂತ್ ಮಟ್ಟಕ್ಕೆ 5 ಲಕ್ಷ ರುಪಾಯಿ ಅಂದರೆ ಅದರ ಪ್ರಮಾಣವೇನು. ಕುತಂತ್ರದಿಂದ ಜೆಡಿಎಸ್ ನನ್ನನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics