ಕೆ ಆರ್ ನಗರದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರ ಒಗ್ಗಟ್ಟು ಪ್ರದರ್ಶನ
ಕೆ ಆರ್ ನಗರ: ನರೇಂದ್ರ ಮೋದಿಯವರು ಎರಡನೇ ಬಾರಿ ಪ್ರಧಾನಿಯಾದರೆ ದೇಶವನ್ನು ಮತ್ತು ಸಂವಿಧಾನವನ್ನು ಹಾಳು ಮಾಡುತ್ತಾರೆ ಎಂಬ ಭಯ ನನಗೆ ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ನಿನ್ನೆ ಮೈಸೂರಿನ ಕೆ ಆರ್ ನಗರದಲ್ಲಿ ಆಯೋಜಿಸಿದ್ದ ಜಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ 282 ಸೀಟುಗಳನ್ನು ಗೆದ್ದು ಅಹಂಕಾರ ಮೆರೆಯುತ್ತಾ ನಮ್ಮ ದೇಶವನ್ನು ಮೋದಿಯವರು ಈಗಾಗಲೇ ಸಾಕಷ್ಟು ಹಾಳು ಮಾಡಿದ್ದಾರೆ. ಈ ಬಾರಿಯೂ ಅವರನ್ನು ಜನ ಆಯ್ಕೆ ಮಾಡಿದರೆ ದೇಶ ಇನ್ನಷ್ಟು ಹಾಳಾಗುವುದಂತೂ ಖಂಡಿತ ಎಂದರು.
ಒಂದು ನಂಬಿಕೆ, ಧರ್ಮ, ಜಾತಿ ಮೇಲೆ ನಮ್ಮ ದೇಶ ನಿಂತಿಲ್ಲ. ಇಲ್ಲಿ ವಿವಿಧ ಧರ್ಮಗಳನ್ನು ಆಚರಿಸುವ ಜನರು ಇದ್ದಾರೆ. ಅದು ಇಸ್ಲಾಂ ಆಗಿರಲಿ, ಕ್ರೈಸ್ತರಾಗಿರಲಿ, ಜೈನರಾಗಿರಲಿ ಅಥವಾ ಹಿಂದೂಗಳಾಗಿರಲಿ ಇಲ್ಲಿ ವಿವಿಧತೆಯಲ್ಲಿ ಏಕತೆಯಿದೆ ಎಂದರು.
ಮೋದಿಯವರ ಮಾತುಗಳಲ್ಲಿರುವ ಮೋಸವನ್ನು ಜನ ಅರ್ಥ ಮಾಡಿಕೊಳ್ಳಬೇಕು. ಮೋದಿಯವರ ಮಾತುಗಳು ಬರೀ ಸುಳ್ಳು, ಡೋಂಗಿಗಳು, ಅದನ್ನು ನಂಬಬೇಡಿ ಎಂದು ನಾನು ಜನರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಒಂದು ವೇಳೆ ಮೋದಿಯವರು ಮತ್ತೆ ಪ್ರಧಾನಿಯಾದರೆ ಡಾ ಬಿ ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನೇ ನಾಶ ಮಾಡುವ ಸಾಧ್ಯತೆಯಿದೆ. ಇದನ್ನು ನಾನು ಅನುಭವದಿಂದ ಹೇಳುತ್ತೇನೆ. ದೇಶದಲ್ಲಿನ ವ್ಯವಸ್ಥೆಯನ್ನು ಯಾವ ರೀತಿ ನಾಶ ಮಾಡಲಾಗಿದೆ ಎಂದು ನಾನು ಹಲವು ಉದಾಹರಣೆಗಳನ್ನು ನೀಡಬಲ್ಲೆ ಎಂದರು.
ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ದೇಶದಲ್ಲಿನ ಪರಿಸ್ಥಿತಿಯನ್ನು ನೋಡಿಕೊಂಡು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics