ಕರ್ನಾಟಕ

ಹಿಂದು, ಮುಸ್ಲಿಂ, ಒಕ್ಕಲಿಗ, ಲಿಂಗಾಯಿತ ಎಲ್ಲರಿಗೂ ಬೇಕು ನೀರು: ಕರಾವಳಿ ತೀರದಲ್ಲಿ ಮಳೆಯಿಲ್ಲದೇ ರೈತರ ಕಣ್ಣೀರು!

Shilpa D
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಸಿರುವ ವಾತಾವರಣ ಎಲ್ಲರ ಮನಸ್ಸಲ್ಲೂ ಅಹ್ಲಾದ ಹುಟ್ಟಿಸುತ್ತೆ, ಆದರೆ ಬರದಿಂದ ತತ್ತರಿಸಿರುವ ಈ ಭಾಗದ ಜನರೂ ಕೂಡ ನೀರಿಗಾಗಿ ಪರದಾಡುತ್ತಿದ್ದಾರೆ. ನದಿಗಳು ಬತ್ತಿ ಹೋಗಿವೆ, ಅಂತರ್ಜಲದ ಮಟ್ಟವೂ ಕಡಿಮೆಯಾಗಿದೆ. ಹೀಗಾಗಿ ಈ ಭಾಗದ ರೈತರು ನಿರಾಶಗೊಂಡು ಜೀವನೋಪಾಯಕ್ಕಾಗಿ ಬೇರೆ ದಾರಿ ಹಿಡಿಯುತ್ತಿದ್ದಾರೆ.
ಬಂಟ್ವಾಳ ತಾಲೂಕಿನ ಲೀಲಾ ಎಂಬ 70 ವರ್ಷದ ಮಹಿಳೆ ತಮ್ಮ 2 ಎಕರೆ ಜಮೀನಿನಲ್ಲಿ ಮಾಡಿದ್ದ ಅಡಿಕೆ ತೋಟ ನೀರಿಲ್ಲದೇ ಒಣಗಿಹೋಗಿದೆ, ಬಾವಿಯಲ್ಲಿ ನೀರಿಲ್ಲ, ಬೋರ್ ವೆಲ್ ಕೊರೆಸಲು ನಮ್ಮಲ್ಲಿ ಸಾಕಷ್ಟು ಹಣವಿಲ್ಲ, ಹೀಗಾಗಿ ಕೃಷಿ ಬಿಟ್ಟು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದೇನೆ, ಆದರೆ ನನಗೂ ವಯಸ್ಸಾಯಿತು, ಆ ಕೆಲಸ ಮಾಡಲು ನನ್ನ ದೇಹ ಸಹಕರಿಸುವುದಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.ಇವರಂತೆಯೇ ಅನೇಕ ರೈತರು ನೀರಿಲ್ಲದೇ ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದಾರೆ.
ಕೇವಲ ಅಡಿಕೆ ಮಾತ್ರವಲ್ಲ ನೀರಿಲ್ಲದೇ ಭತ್ತದ ಬೆಳೆಯೂ ಕೂಡ ನಾಶವಾಗಿದೆ,ಜೊತೆಗೆ ತೆಂಗಿನಮರಗಳು ಒಣಗಿ ನಿಂತಿವೆ.
ಮಳೆಗಾಲದಲ್ಲಿ ಸುಮಾರು 4000-5000 ಮಿಮಿ ಮಳೆಯಾಗುತ್ತಿತ್ತು,. ಕೃಷಿಗೆ ಅಷ್ಚು ನೀರು ಸಾಕಾಗುತ್ತಿತ್ತು, ಆದರೆ 1984 ರಿಂದ ಮಳೆಯ ಪ್ರಮಾಣದಲ್ಲಿ ಕ್ಷೀಣಿಸಿದ್ದು, ಅನಿರ್ಧಿಷ್ಟವಾಗಿದೆ, ಕಳೆದ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ಅಡಿಕೆ ತೋಟ ಹಾಳಾಯಿತು. 
ಉತ್ತರ ಕನ್ನಡ ಜಿಲ್ಲೆಯ. ಭಟ್ಕಳ , ಕಾರವಾರ, ಮುಂಡಗೋಡ್ ಮತ್ತು ಯಲ್ಲಪುರ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ಪ್ರಧಾನ ಮಂತ್ರಿಗಳ ಕಿಸಾನ್ ಯೋಜನೆಯಿಂದ ಸಹಾಯ ಪಡೆಯುತ್ತಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ರೈತ ಶ್ರೀಧರ, ನಾನು ಅದಕ್ಕೆ ಅರ್ಜಿ ಹಾಕಿಲ್ಲ, ಇದರ ಉಪಯೋಗ ಪಡೆಯಬೇಕೇಂದರೇ ರಾಜಕೀಯ ಶಿಫಾರಸು ಬೇಕು, ಅದು ನನಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಕರಾವಳಿ ತೀರದಲ್ಲಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ,. ಆದರೆ ಅವರ ಚುನಾವಣಾ ಪ್ರಣಾಳಿಕೆಯಲ್ಲಿ  ನೀರಿನ ಸಮಸ್ಯೆಯ ಬಗೆಹರಿಸಲು ಆದ್ಯತೆ ನೀಡಿಲ್ಲ, ನಾವು ನಮ್ಮ ಅಭ್ಯರ್ಥಿಗಳನ್ನು ಕೇಳಬೇಕು, ನೀರಿನ ಸಮಸ್ಯೆ ಬಗೆಹರಿಸಲು ಯಾವ ಕ್ರಮ ಕೈಗಳ್ಳುತ್ತೀರಾ ಎಂಬ ಬಗ್ಗೆ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ. ಹಿಂದೂ, ಮುಸ್ಲಿಂ, ಒಕ್ಕಲಿಗ, ಲಿಂಗಾಯತ ಸೇರಿದಂತೆ ಎಲ್ಲರಿಗೂ ನೀರು ಬೇಕು, ಹೀಗಾಗಿ ಅಭ್ಯರ್ಥಿಗಳು ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಬೇಕು ಎಂಬುದು ಈ ಭಾಗದ ಜನರ ಆಶಯ.
SCROLL FOR NEXT