ಕರ್ನಾಟಕ

ಬೆಂಗಳೂರು: ನಕಲಿ ಗುರುತಿನ ಚೀಟಿ ತಯಾರಿಕೆ ಪತ್ತೆ, ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Nagaraja AB

ಬೆಂಗಳೂರು :ನಗರದ ಹೃದಯ ಭಾಗ ಚಿಕ್ಕಪೇಟೆಯಲ್ಲಿನ  ಪ್ರಭಾತ್ ಕಾಂಪ್ಲೆಕ್ಸ್ ನಲ್ಲಿ   ನಕಲಿ ಗುರುತಿನ ಚೀಟಿ ತಯಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನೂರಾರು ಯಂತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗಕ್ಕೆ ಬಿಜೆಪಿ ಕಾನೂನು ಘಟಕದಿಂದ ದೂರು ಸಲ್ಲಿಸಲಾಗಿದೆ ಎಂದು ಆ ಪಕ್ಷದ ಟ್ವಿಟರ್ ನಲ್ಲಿ ಹೇಳಲಾಗಿದೆ.

ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹೀಂ ಖಲೀಲುಲ್ಲಾ ಪ್ರಭಾತ್ ಕಾಂಪ್ಲೆಕ್ಸ್ ನ ಮೂರನೇ ಅಂತಸ್ತಿನ 507 ಕೊಠಡಿಯಲ್ಲಿ ನಕಲಿ ಗುರುತಿನ ಚೀಟಿ ತಯಾರಿಸುತ್ತಿದ್ದಾಗ ಬಿಜೆಪಿ ಕಾರ್ಪೋರೇಟರ್ ಹಾಗೂ ಕಾರ್ಯಕರ್ತರ ಕೈಗೆ ಸಿಕ್ಕಿ ಬಿದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಆತನ ಜೊತೆಯಲ್ಲಿದ್ದ 18 ಮಂದಿಯನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಈ ಕೃತ್ಯದ ಹಿಂದೆ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅರ್ಷದ್ ರಿಜ್ವಾನ್ ಕೈವಾಡದ ಶಂಕೆ ಇದ್ದು, ವಿಚಾರಣೆ ಪೂರ್ಣಗೊಳ್ಳುವವರೆಗೂ ಆತ ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾ ಆಯೋಗ ನಿರ್ಬಂಧಿಸಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಂವಿಧಾನ ಬಾಹಿರ ಕೃತ್ಯಗಳ ಬಗ್ಗೆ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಮಾತನಾಡಬೇಕು ಹಾಗೂ ರಿಜ್ವನ್ ಅರ್ಷದ್ ಅವರನ್ನು ಪಕ್ಷದಿಂದ ವಜಾ ಮಾಡಬೇಕೆಂದು ಒತ್ತಾಯಿಸಲಾಗಿದೆ.
SCROLL FOR NEXT