ಕುಮಾರಸ್ವಾಮಿ 
ಕರ್ನಾಟಕ

ಸರ್ಕಾರ ಪತನಕ್ಕೆ ಯಡಿಯೂರಪ್ಪ ಗಡುವು ನಿರರ್ಥಕ: ಸಿಎಂ ಕುಮಾರಸ್ವಾಮಿ

ಎಲ್ಲಿಯವರೆಗೆ ರಾಜ್ಯದ ಜನತೆಯ ಆಶೀರ್ವಾದ ಇರುತ್ತದೆಯೋ ಅಲ್ಲಿಯತನಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ....

ಶಿವಮೊಗ್ಗ: ಎಲ್ಲಿಯವರೆಗೆ ರಾಜ್ಯದ ಜನತೆಯ ಆಶೀರ್ವಾದ ಇರುತ್ತದೆಯೋ ಅಲ್ಲಿಯತನಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಮೇ 23ರ ನಂತರ ಏನಾಗಲಿದೆ ಎನ್ನವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾದು ನೋಡಲಿ. ಸರ್ಕಾರಕ್ಕೆ ಯಾರೂ ಡೆಡ್‍ಲೈನ್ ಕೊಡುವುದು ಬೇಡ . ಅವರ ಗಡುವು ನಿರರ್ಥಕ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬುಧವಾರ ಹೇಳಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಪರ ಕುಮಾರಸ್ವಾಮಿ ಪ್ರಚಾರ ನಡೆಸಿದರು.
ಇದಕ್ಕೂ ಮುನ್ನ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರು ತಮ್ಮ ಬದುಕಿನ ಕೊನೆಯ ದಿನಗಳಲ್ಲಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಕಾಣಬೇಕೆಂಬ ಮಹಾದಾಸೆ ಹೊಂದಿದ್ದರು. ಇಂದು ನಾನು ಮುಖ್ಯಮಂತ್ರಿಯಾಗಿರುವುದನ್ನು ನೋಡಲು ಅವರು ಇರಬೇಕಿತ್ತು. ಬಂಗಾರಪ್ಪ ಅವರ ಪ್ರತಿರೂಪವಾಗಿರುವ ಮಧು ಬಂಗಾರಪ್ಪ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಬಂಗಾರಪ್ಪ ಅವರ ಋಣವನ್ನು ತೀರಿಸಲು ಹೋರಾಟ ಮಾಡುತ್ತಿದ್ದೇನೆ. ಮಧು ಬಂಗಾರಪ್ಪ ಅವರನ್ನು ಗೆಲ್ಲಿಸುವುದು ಹಾಗೂ ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ಜಾರಿಗೆ ತರುವುದು ತಮ್ಮ ಮುಂದಿರುವ ಗುರಿ ಎಂದರು.
ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಇಸ್ರೇಲ್‍ಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ನನಗೆ ಹೃದಯಾಘಾತವಾಯಿತು. ಆ ಸಂದರ್ಭದಲ್ಲಿ ದೇಶಕ್ಕೆ ವಾಪಸಾಗುವಂತೆ ಸ್ನೇಹಿತರು, ಪಕ್ಷದ ಮುಖಂಡರು ನನಗೆ ಸಲಹೆ ನೀಡಿದರು. ಆದರೆ ರಾಜ್ಯದ ರೈತರಿಗಾಗಿ ನನ್ನ ಗಂಭೀರ ಆರೋಗ್ಯ ಪರಿಸ್ಥಿತಿಯನ್ನೂ ಲೆಕ್ಕಿಸದೇ ಇಸ್ರೇಲ್ ಮಾದರಿ ಕೃಷಿ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದ್ದೇನೆ. ಅಲ್ಲಿನ ರೈತ ಸಂಘಟನೆ, ಕೃಷಿ ಕಂಪೆನಿಗಳ ಜೊತೆ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ರೈತರಿಗಾಗಿ ರಾಜ್ಯಾದ್ಯಂತ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಬಿಜೆಪಿ ನಾಯಕರು ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ್ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ದೇಶದಲ್ಲಿ ಸಂವಿಧಾನಕ್ಕೆ ಅಪಚಾರ ಮಾಡುವಂತಹ ಕೃತ್ಯಗಳಲ್ಲಿ ಬಿಜೆಪಿ ನಾಯಕರು ತೊಡಗಿದ್ದು, ಇಂತಹವರಿಂದಾಗಿಯೇ ದೇಶದಲ್ಲಿ ಅಭದ್ರತೆ ಸೃಷ್ಟಿಯಾಗಿದೆ ಎಂದರು. 
ನರೇಂದ್ರ ಮೋದಿ ಅವರ ಬಣ್ಣದ ಮಾತುಗಳಿಗೆ ಮರುಳಾಗಿ ಕಳೆದ ಬಾರಿ ಜನತೆ ಅವರಿಗೆ ಮತ ಹಾಕಿದರು. 2014 ಚುನಾವಣೆ ಸಂದರ್ಭದಲ್ಲಿ ಮೋದಿ ದೇಶದ ಜನತೆಗೆ ನೀಡಿದ ಯಾವುದೇ ಭರವಸೆಯನ್ನೂ ಈಡೇರಿಸಲಿಲ್ಲ. ರೈತರಿಗೆ ಮೋದಿ ಸರ್ಕಾರ ರಕ್ಷಣೆ ನೀಡಲಿಲ್ಲ.  ಬಿಜೆಪಿ ನಾಯಕರು ದೇಶದ ಅಭಿವೃದ್ಧಿಗಾಗಿ ಮತ ಯಾಚಿಸುತ್ತಿಲ್ಲ. ಕೇವಲ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ದುರುದ್ದೇಶದಿಂದ ಮಾತ್ರ ಅವರು ಮತಯಾಚಿಸುತ್ತಿದ್ದಾರೆ ಎಂದರು.
ಸರ್ಜಿಕಲ್ ಸ್ಟ್ರೈಕ್ ಹೆಸರನ್ನು ಮುಂದಿಟ್ಟುಕೊಂಡು ಬಿಜೆಪಿಗರು ಮತಯಾಚಿಸುತ್ತಿರುವುದು ಸರಿಯಲ್ಲ. ನರೇಂದ್ರ ಮೋದಿಯವರಿಗಾಗಲೀ, ಬಿಜೆಪಿ ನಾಯಕರಿಗಾಗಲೀ ಯಾವುದೇ ದೂರದೃಷ್ಟಿಯಿಲ್ಲ. ದೂರದೃಷ್ಟಿ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರು, ಇಂದಿರಾಗಾಂಧಿ ಅವರ ಅವಧಿಯಲ್ಲಿ ಯುದ್ಧಗಳು ನಡೆದಿವೆಯಾದರೂ ಬಿಜೆಪಿಯವರಂತೆ ಅವರೆಂದೂ ಸೈನಿಕರ ಹೋರಾಟವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನದ ಆಶಯಗಳು, ಅಂಬೇಡ್ಕರ್ ಅವರು ಕಂಡಂತಹ ಭಾರತದ ಕನಸು ನುಚ್ಚುನೂರಾಗಲಿದೆ ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಹಲವಾರು ದುರ್ಘಟನೆಗಳು ನಡೆದಿದ್ದು, ಇವುಗಳನ್ನು ನೋಡಿಕೊಂಡು ಮತದಾರರು ಎಚ್ಚರಿಕೆಯಿಂದ ಮತ ಹಾಕಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದಾದರೆ ಅದು ಮಧು ಬಂಗಾರಪ್ಪರಿಂದ ಮಾತ್ರ. ಮಧು ಬಂಗಾರಪ್ಪ ಅವರ ಮನವಿ ಮೇರೆಗೆ ಜಿಲ್ಲೆಯ ರೈತರಿಗಾಗಿ 600 ಕೋಟಿ ರೂ.ಗಳನ್ನು ನೀರಾವರಿ ಯೋಜನೆಗೆ ನೀಡಿದ್ದೇವೆ ಎಂದರು.
ಕುಮಾರಸ್ವಾಮಿ ಅವರದ್ದು ನಕಲಿ ಕಣ್ಣೀರು. ಮಂಡ್ಯದಲ್ಲಿ ಕೋಟ್ಯಾಂತರ ರೂ. ಖರ್ಚು ಮಾಡಿದರೂ ಅವರಿಗೆ ಕಣ್ಣೀರು ಹಾಕುವ ಪರಿಸ್ಥಿತಿ ಇದೆ ಎನ್ನುವ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಭಾವನೆಗಳಿಲ್ಲದವರಿಗೆ ಕಣ್ಣೀರು ಬರುವುದಿಲ್ಲ. ಕಣ್ಣೀರಿನ ಮಹತ್ವವೂ ಅರಿವಾಗುವುದಿಲ್ಲ. ಅಭಿನಯ ಕಲಿತರೂ ಸಹಜವಾಗಿ ಕಣ್ಣೀರು ಬರುವುದಿಲ್ಲ. ಜನರ ಕಷ್ಟ ನೋಡಿದವರಿಗೆ ಕಣ್ಣೀರು ಬರುವುದು ಸಹಜ ಎಂದರು.
ಪ್ರಚಾರಕ್ಕೂ ಮುನ್ನ ಆನವಟ್ಟಿಗೆ ಬಂದಿಳಿದ ಕುಮಾರಸ್ವಾಮಿ ಅವರ ಹೆಲಿಕಾಪ್ಟರ್ ಅನ್ನು ಚುನಾವಣಾಧಿಕಾರಿಗಳು ಸುಮಾರು 20 ನಿಮಿಷಕ್ಕಿಂತಲೂ ಹೆಚ್ಚಿನ ಸಮಯ ತಪಾಸಣೆ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

SCROLL FOR NEXT