ಕರ್ನಾಟಕ

ಲೋಕಸಭೆ ಚುನಾವಣೆ: ಮತದಾನದ ವೇಳೆ ಮಲ್ಲಿಕಾರ್ಜುನ ಖರ್ಗೆ ನಿಯಮ ಉಲ್ಲಂಘನೆ ಆರೋಪ!

Raghavendra Adiga
ಕಲಬುರ್ಗಿ: ಲೋಕಸಭೆ ಮಹಾಚುನಾವಣೆಯ ಮೂರನೇ ಹಂತದ ಮತದಾನ ಇಂದು (ಏ.23) ನಡೆಯುತ್ತಿದ್ದು ಕರ್ನಾಟಕದಲ್ಲಿ ಎರಡನೇ ಹಾಗೂ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಡೆದಿದೆ. ಇದರ ನಡುವೆ ಕಲಬುರ್ಗಿಯಲ್ಲಿ ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ ಮತದಾನದ ವೇಳೆ ತಮ್ಮ ಪತ್ನಿಯನ್ನೂ ಜತೆಯಾಗಿ ಕರೆದೊಯ್ಯುವ ಮೂಲಕ ನಿಯಮವನ್ನು ಉಲ್ಲಂಘಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ದಂಪತಿ ಸಮೇತವಾಗಿ ಬೂತ್ ನಂಬರ್ 119ನಲ್ಲಿ ಮತದಾನ ಮಾಡುವ ವೇಳೆ ಪತ್ನಿಯೊಡನೇ ತೆರಳಿದ್ದಾರೆ, ಮತಯಂತ್ರದಲ್ಲಿ ಗುಂಡಿಯೊತ್ತುವ ವೇಳೆ ಸಹ ಪತ್ನಿ ಅವರ ಜತೆಗೆ ಇದ್ದರು. ಇದು ಸ್ಪಷ್ಟವಾಗಿ ಮತದಾನ ನಿಯಮ ಉಲ್ಲಂಘನೆಯಾಗಿದೆ. 
ಖರ್ಗೆ ಮತದಾನ ನಿಯಮ ಉಲ್ಲಂಘನೆ ಮಾಡಿರುವ ಕುರಿತಂತೆ ಚುನಾವಣಾ ಆಯುಕ್ತರು ಸ್ವತಃ ಹೇಳಿಕೆ ನೀಡಿದ್ದಾರೆ.
ಇನ್ನು ಇಂದು ಮತದಾನ ನಡೆಯುತ್ತಿರುವ ಎಲ್ಲ 14 ಲೋಕಸಭಾ ಕ್ಷೇತ್ರಗಳಲ್ಲಿ  ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.39.87ರಷ್ಟು ಮತದಾನವಾಗಿದೆ
ನೀತಿ ಸಂಹಿತೆ ಉಲ್ಲಂಘಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಇದೇ ವೇಳೆ ಬೆಳಗಾವಿಯಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತದಾನದ ವೇಳೆಯೇ ಸಾರ್ವಜನಿಕರ ಬಳಿ ಮತಯಾಚನೆ ಮಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.ಬೂತ್ ಸಂಖ್ಯೆ 60(ಹಿಂಡಲಗ)ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ "ಈ ಒಂದು ಬಾರಿ ಕಾಂಗ್ರೆಸ್ ಗೆ ಬೆಂಬಲ ನೀಡಿ"ಎಂದು ಮತಗಟ್ಟೆಯಲ್ಲಿಯೇ ಮತದಾರರ ಬಳಿ ಮತಯಾಚನೆಗೆ ತೊಡಗಿದ್ದರು. 
ಲಕ್ಷ್ಮಿ ಹೆಬ್ಬಾಳ್ಕರ್ ತಾವು ಮತದಾನ ಮಾಡಿದ ನಂತರ ಮತಗಟ್ಟೆಯ ಹೊರಗೆ ಬರುವದಕ್ಕೆ ಮುನ್ನವೇ ಸರತಿಯಲ್ಲಿ ನಿಂತಿದ್ದ ಮತದಾರರಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಕೇಳಿಕೊಳ್ಳುವ ಮೂಲಕ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ.
ಆದರೆ ಸ್ಥಳದಲ್ಲಿದ್ದ ಯಾವುದೇ ಚುನಾವಣಾಧಿಕಾರಿಗಳು ಹೆಬ್ಬಾಳ್ಕರ್ ಕೃತ್ಯದ ಬಗೆಗೆ ಯಾವ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದು ಅಚ್ಚರಿಗೆ ಕಾರಣವಾಗಿದೆ.
SCROLL FOR NEXT