ಕರ್ನಾಟಕ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಮಲ್ಲಿಕಾರ್ಜುನ ಖರ್ಗೆಗೆ ಕ್ಲೀನ್ ಚಿಟ್

Lingaraj Badiger
ಕಲಬುರಗಿ: ಹಿರಿಯ ಕಾಂಗ್ರೆಸ್ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಏಪ್ರಿಲ್ 23ರಂದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಿಂದ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ.
ಏಪ್ರಿಲ್ -23ರಂದು ಮತದಾನದ ವೇಳೆ ಕಾಂಗ್ರೆಸ್ ನಾಯಕ ಖರ್ಗೆ ಅವರು, ಯಾವುದೇ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಮತಗಟ್ಟಗೆ ಅವರೊಬ್ಬರೇ ಪ್ರವೇಶಿಸಿ ಮತಚಲಾಯಿಸಿದ್ದಾರೆ ಎಂದು ಮತಗಟ್ಟೆ ಅಧಿಕಾರಿಗಳು ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು, ಮತಗಟ್ಟಗೆ ಪತ್ನಿಯೊಂದಿಗೆ ಪ್ರವೇಶಿಸಿ, ಮತಗಟ್ಟೆಯಲ್ಲೇ ತಮ್ಮ ಪೋಟೋ ತೆಗೆಯಲು, ಛಾಯಾಗ್ರಾಹರಿಗೆ ಅವಕಾಶ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಕಲಬುರಗಿ ಜಿಲ್ಲಾಧಿಕಾರಿ, ಈ ಘಟನೆ ಕುರಿತು ಮತಗಟ್ಟೆ ಅಧಿಕಾರಿಗಳಿಂದ ವರದಿ ಕೋರಿದ್ದರು. ಏಪ್ರಿಲ್ 23ರಂದು ಕಲಬುರಗಿಯ ಮತಗಟ್ಟೆಯೊಂದರಲ್ಲಿ ಪತ್ನಿಯೊಂದಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಮತಚಲಾಯಿಸಿದ್ದನ್ನು ಸುದ್ದಿ ವಾಹಿನಿಗಳು ಬಿತ್ತರಿಸಿದ್ದವು.
SCROLL FOR NEXT