ಕರ್ನಾಟಕ

ಮತದಾನ ನಿಯಮ ಉಲ್ಲಂಘನೆ: ಮಲ್ಲಿಕಾರ್ಜುನ ಖರ್ಗೆಗೆ ಕ್ಲೀನ್ ಚಿಟ್ ಸಾಧ್ಯತೆ

Raghavendra Adiga
ಕಲಬುರ್ಗಿ: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕಲಬುರ್ಗಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಮತದಾನದ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಪಡೆಯಲಿದ್ದಾರೆ. ಖರ್ಗೆ ಮಂಗಳವಾರ(ಏ.23) ನಡೆದ ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನದ ವೇಳೆ ತಮ್ಮ ಪತ್ನಿ, ಕುಟುಂಬದವರೊಡನೆ ಆಗಮಿಸಿದ್ದು ಮತದಾನ ಮಾಡುವಾಗ ಅವರ ಪತ್ನಿಯನ್ನು ಸಹ ಇವಿಎಂ ಸಮೀಪಕ್ಕೆ ಕರೆದೊಯ್ದಿದ್ದರು. ಈ ಸಂಬಂಧ ಮಾದ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು ಖರ್ಗೆ "ಗುಪ್ತ ಮತದಾನ" ನಿಯಮ ಉಲ್ಲಂಘಿಸಿದ್ದಾರೆಂದು ದೂರು ದಾಖಲಾಗಿತ್ತು. ಆದರೆ ಈಗ ಕ್ಷೇತ್ರದ ಉಪ ಕಮೀಷನರ್ ಮತ್ತು ರಿಟರ್ನಿಂಗ್ ಅಧಿಕಾರಿ (ಆರ್.ಒ.) ಅಗಿರುವ ವೆಂಕಟೇಶ್ ಕುಮಾರ್ ಪ್ರಕರಣ ಸಂಬಂಧ ಬೂತ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿದ್ದಾರೆ.
ಚುನಾವಣಾ ಆಯುಕ್ತರ ವರದಿಯಲ್ಲಿ ಆರ್.ಒ. ಅಧಿಕಾರಿಗಳಿಂದ ವಿವರಣೆಯನ್ನು ಕೋರಿದ ಮಾಹಿತಿ ಇದ್ದು ಕೇಂದ್ರ ಸರ್ಕಾರ ನೇಮಿಸಿದ ಸೂಕ್ಷ್ಮ ಪರಿವಿಖ್ಷಕ ಸೇರಿ ಒಟ್ಟಾರೆ ಆರು ಮಂದಿ ಅಧಿಕಾರಿಗಳಿಂದ ವಿವರ ಪಡೆಯಲಾಗಿದೆ. ಎಲ್ಲರೂ ಪ್ರತ್ಯೇಕವಾಗಿ ಹೇಳಿಕೆ ನೀಡಿದ್ದು ಅವರ ಹೇಳಿಕೆಗಳ ಅನುಸಾರ ಘಟನಾ ಸರಣಿಯಲ್ಲಿ ಸಾಮ್ಯತೆ ಇದೆ.
ಅವರ ಹೇಳಿಕೆಗಳ ಅನುಸಾರ ಖರ್ಗೆ ಮತದಾನ ಮಾಡುವಾಗ ಒಬ್ಬರೇ ಮತಯಂತ್ರವಿದ್ದ ಆವರಣ ಪ್ರವೇಶಿಸಿದ್ದಾರೆ, ಮತ್ತು ಅವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದರೆ ಸ್ಥಳದಲ್ಲಿದ್ದ ಮಾದ್ಯಮದ ಛಾಯಾಗ್ರಾಹಕರು ಖರ್ಗೆ ತಮ್ಮ ಪತ್ನಿಯೊಂದಿಗೆ ಮತದಾನದ ಬೂತ್ ಅನಲ್ಲಿ ಒಟ್ತಾಗಿ ನಿಂತು ಫೋಟೋಗೆ ಪೋಸ್ ನೀಡಬೇಕೆಂದು ಒತ್ತಾಯಿಸಿದ ಕಾರಣ ಪತ್ನಿ ಸಮೇತವಾಗಿ ಖರ್ಗೆ ಕಾಣಿಸಿಕೊಳ್ಲಬೇಕಾಯಿತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಖರ್ಗೆ ಮತದಾನ ಮಾಡುವಾಗ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂಬುದು ಈ ವರದಿಯಿಂದ ಸಾಬೀತಾಗಿದೆಯಾದರೂ ಈ ವರದಿಯ ಅನುಸಾರ  ಖರ್ಗೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಂತಾಗಿದೆ. ಯಾವುದೇ ವ್ಯಕ್ತಿ ಒಮ್ಮೆ ಮತ ಹಾಕಿದ ನಂತರ ಮತ್ತೆ ಮತಯಂತ್ರವಿರುವ ಆವರಣವನ್ನು ಪ್ರವೇಶಿಸುವುದು ನಿಷಿದ್ಧವಾಗಿದೆ. ವರದಿ ಹೇಳಿದಂತೆ ಖರ್ಗೆ ಮತ ಚಲಾವಣೆ ಮಾಡಿದ ನಂತರ ಛಾಯಾಗ್ರಾಹಕರ ಒತ್ತಾಯದ ಮೇರೆಗೆ ಮತ್ತೊಮ್ಮೆ ಪತ್ನಿ ಸಮೇತವಾಗಿ ಆ ಆವರಣ ಪ್ರವೇಶಿಸಿದ್ದಾರೆ. ಇದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ.
ಪತ್ರಿಕೆಯೊಡನೆ ಮಾತನಾಡಿದ ವೆಂಕಟೇಶ್ ಕುಮಾರ್ ತಾವು ವರದಿಯನ್ನು ಮುಖ್ಯ ಚುನಾವಣಾಧಿಕಾರಿಗೆ ತಲುಪಿಸಿದ್ದಾಗಿ ಹೇಳಿದ್ದು ವರದಿಯಲ್ಲಿನ ಅಂಶದ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು ಖರ್ಗೆ ವಿರುದ್ಧ ಪ್ರಿಲ್ 23 ರಂದು ಮುಖ್ಯ ಚುನಾವಣಾ ಆಯುಕ್ತರಲ್ಲಿ ದೂರು ದಾಖಲಿಸಿದ್ದರು.ಖರ್ಗೆ ಮತದಾನದ ರಹಸ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಅವರು ದೂರು ನೀಡಿದ್ದರು.
SCROLL FOR NEXT