ಬೆಂಗಳೂರು: ನಗರದ ಶ್ರಿನಿವಾಸ ಬಾರ್ ಅಂಡ್ ರೆಸ್ಟೂರೆಂಟ್ ಹೆಸರಿನಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಲೈವ್ ಬ್ಯಾಂಡ್ ಗಳ ಮೇಲೆ ದಾಳಿ ನಡೆಸಿರುವ ಪೊಲೀಸರು, ಬಾರ್ ಮಾಲೀಕರು, ವ್ಯವಸ್ಥಾಪಕರು ಹಾಗೂ 13 ಗ್ರಾಹಕರು ಸೇರಿದಂತೆ ಒಟ್ಟು 17 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಪಂಜಾಬ್ ಹಾಗೂ ದೆಹಲಿಯ 10 ಯುವತಿಯರನ್ನು ರಕ್ಷಿಸಿದ್ದಾರೆ.
ದಾಳಿಯ ವೇಳೆ ಬಾರ್ ಮಾಲೀಕರು ಹಾಗೂ ವ್ಯವಸ್ಥಾಪಕರಾದ ಸಂತೋಷ್, ಅಭಿಷೇಕ್, ಉಮೇಶ್, ರಮೇಶ್ ಹಾಗೂ 13 ಗ್ರಾಹಕರನ್ನು ಬಂಧಿಸಲಾಗಿದೆ. ಮತ್ತೊಬ್ಬ ಬಾರ್ ಮಾಲೀಕ ವೆಂಕಟೇಶ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಿಸಲಾಗಿರುವ ಯುವತಿಯರನ್ನು ಬಾರ್ ಗರ್ಲ್ ಗಳೆಂದು ನೇಮಕ ಮಾಡಿಕೊಂಡು, ಅವರನ್ನು ಗ್ರಾಹಕರ ಬಳಿ ಅಶ್ಲೀಲವಾಗಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು, ಇದರಿಂದ ಹುಚ್ಚೆದ್ದ ಗ್ರಾಹಕರು ನೃತ್ಯ ಮಾಡುವ ಯುವತಿಯರ ಮೇಲೆ ನೋಟುಗಳನ್ನು ಎಸೆಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ದಾಳಿಯ ವೇಳೆ ಪೊಲೀಸರು 19 ಮೊಬೈಲ್ ಪೋನ್ ಗಳು, 1 ಲಕ್ಷದ 30 ಸಾವಿರ 890ರೂಪಾಯಿ ನಗದು, ಸುಮಾರು 2.50 ಲಕ್ಷ ಮೌಲ್ಯದ ಮ್ಯೂಸಿಕ್ ಸಿಸ್ಟಮ್ ವಶಪಡಿಸಿಕೊಂಡಿದ್ದಾರೆ. ವೈಯಾಲಿಕಾವಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.