ಅರಸೀಕೆರೆ: ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗುವವರ ದವಡೆಗೆ ಹೊಡೀರಿ ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಅವರು ದೇಶದ ಜನರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂಪಾಯಿ ಹಣ ಹಾಕುತ್ತೇನೆ ಎಂದಿದ್ದರು ಯಾರಿಗಾದರೂ ಬಂದಿದೆಯೇ ಎಂದು ಪ್ರಶ್ನಿಸಿದರಲ್ಲದೇ, ಮೋದಿ ಮೋದಿ ಎಂದು ಘೋಷಣೆ ಕೂಗುವವರ ದವಡೆಗೆ ಹೊಡೆದು ಹಣ ಏಲ್ಲಿ ಅಂತ ಕೇಳಿ ಎಂದು ಆಕ್ರೋಶ ಭರಿತರಾಗಿ ಮಾತನಾಡಿದ್ದಾರೆ.
ಮೋದಿ ಮೋದಿ ಎಂದು ಬರುವವರಿಗೆ ದವಡೆಗೆ ಹೊಡೀರಿ, ಸ್ವೀಸ್ ಬ್ಯಾಂಕ್ ಹಣ ತಂದು ಎಲ್ಲರ ಖಾತೆಗೆ ಹಣ ಹಾಕ್ತೀವಿ ಅಂದಿದ್ರು, ಯಾರಾದ್ದಾದ್ರು ಖಾತೆಗೆ 15 ಲಕ್ಷ ರೂ ಹಣ ಬಂತಾ ಎಂದು ಬಿಜೆಪಿಯವರು ಬಂದಾಗ ನೀವು ಕೇಳ್ಬೇಕು, ಎಲ್ಲಿ ನಿಮ್ಮ ಮೋದಿ ಯಾರ ಖಾತೆಗೆ ಹಣ ಹಾಕಿದ್ದಾರೆ ಎಂದು ಪ್ರಶ್ನಿಸಿ ಎಂದು ಶಿವಲಿಂಗೇಗೌಡ ಜೆಡಿಎಸ್ ಕಾರ್ಯಕರ್ತರನ್ನು ಒತ್ತಾಯಿಸಿದರು
ಶಿವಲಿಂಗೇಗೌಡರ ಹೇಳಿಕೆಯ ಸುದ್ದಿ ಹಾಗೂ ವಿಡಿಯೋ ವೈರಲ್ ಆಗುತ್ತಿದ್ದಂತೆ ತಾವು ಆ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ ಎಂದು ಶಿವಲಿಂಗೇಗೌಡ ಹೇಳಿದ್ದಾರೆ.
ಮತ್ತೊಂದೆಡೆ ಶಿವಲಿಂಗೇಗೌಡ ಅವರ ಹೇಳಿಕೆಯನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ವಾಧಿಕಾರಿ ಆಡಳಿತದಲ್ಲಿ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿದೆ.