ಮಂಡ್ಯ: ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾಗುತ್ತಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಇಂದು ಬೃಹತ್ ಶಕ್ತಿ ಪ್ರದರ್ಶನ ತೋರುವ ಮೂಲಕ ನಾಮಪತ್ರ ಸಲ್ಲಿಸಿದರು.
ತೆರೆದ ವಾಹನದಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೂ ಭರ್ಜರಿ ರೋಡ್ ಶೋ ನಡೆಸಿ ಜಿಲ್ಲಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.ಸಚಿವರಾದ ಡಿಕೆ ಶಿವಕುಮಾರ್, ಎಚ್ ಡಿ ರೇವಣ್ಣ, ಸಿ.ಎಸ್. ಪುಟ್ಟರಾಜ್, ಅನಿತಾ ಕುಮಾರಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ತೆರೆದ ವಾಹನದಲ್ಲಿಯೇ ಜನತೆಯನ್ನುದ್ದೇಶಿಸಿ ಮಾತನಾಡಿದ ಇಂಧನ ಸಚಿವ ಡಿ. ಕೆ. ಶಿವಕುಮಾರ್, ಜಾತ್ಯತೀತಾ ಸರ್ಕಾರವನ್ನು ರಚಿಸಬೇಕೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ಬೇಷರತ್ತು ಬೆಂಬಲ ನೀಡುವ ಮೂಲಕ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಲಾಗಿದೆ. ಕೊಟ್ಟ ಮಾತನ್ನು ವಾಪಾಸ್ ಪಡೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಲೋಕಸಭಾ ಉಪ ಚುನಾವಣೆಯಲ್ಲಿ ಶಿವಮೊಗ್ಗ ಬಿಟ್ಟು ಉಳಿದ ಕಡೆಗಳಲ್ಲಿ ಪ್ರಚಾರ ನಡೆಸುವ ಮೂಲಕ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲಾಗಿದೆ. ಮೈತ್ರಿ ಧರ್ಮ ಪಾಲನೆ ಹಿನ್ನೆಲೆಯಲ್ಲಿ ಸುಮಲತಾ ಅವರಿಗೆ ಮೈಸೂರು, ಬೆಂಗಳೂರು ದಕ್ಷಿಣದಲ್ಲಿ ಸೀಟು ಕೊಡಲು ತೀರ್ಮಾನಿಸಲಾಗಿತ್ತು. ಆದರೆ, ಅವರು ಒಪ್ಪಿಕೊಳ್ಳಲಿಲ್ಲ ಎಂದು ತಿಳಿಸಿದರು.