ಬೆಂಗಳೂರು: ನಮ್ಮ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದ್ದು, ಗುಪ್ತಚರ ಇಲಾಖೆ ಅಧಿಕಾರಿಗಳು ತಮ್ಮ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸೋಮವಾರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಇಂದು ನಗರದ ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಸಿಎಂ ಕುಮಾರಸ್ವಾಮಿ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಆಡಳಿತ ಯಂತ್ರವನ್ನು ತಮ್ಮ ಪುತ್ರನ ಪರ ಹಾಗೂ ತಮ್ಮ ವಿರುದ್ದ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗಂಬೀರ ಆರೋಪ ಮಾಡಿದರು.
ತಮ್ಮ ಮನೆ ಬಳಿ ಗುಪ್ತಚರ ಇಲಾಖೆ ಪೊಲೀಸ್ ಅಧಿಕಾರಿಗಳನ್ನು ಬಿಡಲಾಗಿದೆ. ನಮಗೆ ಭದ್ರತೆ ಬಗ್ಗೆ ಆತಂಕ ಎದುರಾಗಿದೆ. ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬೆದರಿಕೆ ಮೂಲಕ ತಡೆಯೊಡ್ಡುವ ಕೆಲಸ ನಡೆಯುತ್ತಿದೆ. ಪೊಲೀಸರು ನಮ್ಮ ಚಲನವಲನಗಳನ್ನು ಗಮನಿಸಿ ಮಾಹಿತಿ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ನಾವೇನು ಕ್ರಿಮಿನಲ್ ಗಳಂತೆ ಕಾಣಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಇಂತಹ ಕೀಳುಮಟ್ಟದ ರಾಜಕಾರಣ ಮಾಡಬಾರದು ಎಂದು ಟೀಕಿಸಿದರು.
ನಮ್ಮೆಲ್ಲರ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ನಮ್ಮ ಪ್ರಚಾರ ಕಾರ್ಯ, ಚುನಾವಣಾ ತಂತ್ರಗಾರಿಕೆ, ಕಾರ್ಯಕರ್ತರ ಸಂಪರ್ಕಕ್ಕೆ ಅಡ್ಡಿಯನ್ನುಂಟುಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ನಾಮಪತ್ರ ಸಲ್ಲಿಸುವಾಗ ವಿದ್ಯುತ್ ಪ್ರಸರಣಕ್ಕೆ ಅಡ್ಡಿಯುಂಟು ಮಾಡಿದ್ದಾರೆ. ಮಂಡ್ಯದಲ್ಲಿಂದು ಮನೆಮನೆಗೆ ತೆರಳಿ ಪ್ರತಿ ಮತದಾರರಿಗೆ ಸಾವಿರಾರ ರೂಪಾಯಿ ಹಣ ಹಂಚುತ್ತಿದ್ದಾರೆ. ನಿಖಿಲ್ ಪ್ರಚಾರಕ್ಕಾಗಿ ಪ್ರತೀ ವ್ಯಕ್ತಿಗೆ 500 ರೂ ಹಣ, ಮಧ್ಯಾಹ್ನ ಊಟಕ್ಕೆ, ಪೆಟ್ರೋಲ್ ಖರ್ಚು ವೆಚ್ಚು ಕೊಡುವ ಕೆಲಸ ಮಾಡುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರು ದೂರಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರು, 8 ಜನ ಜೆಡಿಎಸ್ ಶಾಸಕರಿದ್ದಾರೆ. ನಮ್ಮ ಬಗ್ಗೆ ಅವರಿಗೆ ಆತಂಕ ಬೇಡ. ಜಿಲ್ಲೆಯ ಸಂಪೂರ್ಣ ಅಧಿಕಾರವನ್ನು ತಮ್ಮ ಅನುಕೂಲಕ್ಕೆ ಬಳಸುವುದನ್ನು ಅವರು ಬಿಡಬೇಕು. ಮತದಾರರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ಅವರು ಜೆಡಿಎಸ್ ನಾಯಕರಿಗೆ ಸಲಹೆ ನೀಡಿದ್ದಾರೆ.
ಅಂಬರೀಶ್ ಅವರ ಹೆಸರನ್ನು ಜೆಡಿಎಸ್ ಬಳಸುವುದನ್ನು ನಿಲ್ಲಿಸಲಿ. ಎಲ್ಲೆಡೆ ಅಂಬರೀಶ್ ವಿಚಾರ ಹಾಗೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಭಾಷಣ ಮಾಡುವುದು ಸರಿಯಲ್ಲ. ನನ್ನ ಹೆಸರಿನಲ್ಲಿ ಸುಮಲತಾ ಅಂಬರೀಶ್ ಹೆಸರು ಸೇರಿಕೊಂಡಿದೆ ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅಂಬರೀಶ್ ಅವರ ಹೆಸರನ್ನು ತಾವು ಬಂಡವಾಳ ಮಾಡಿಕೊಂಡಿಲ್ಲ. ಇಷ್ಟು ಕೀಳು ಮಟ್ಟದ ರಾಜಕಾರಣವನ್ನು ಎದುರಿಸುವ ಶಕ್ತಿ ತಮ್ಮಲ್ಲಿದೆ ಎಂದು ಮುಖ್ಯಮಂತ್ರಿ, ಹಾಗೂ ಜೆಡಿಎಸ್ ಸಚಿವರಿಗೆ ಸುಮಲತಾ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos