ನಾಮಪತ್ರ ಸಲ್ಲಿಸುತ್ತಿರುವ ತೇಜಸ್ವಿ ಸೂರ್ಯ
ಬೆಂಗಳೂರು: ಕೊನೆ ಕ್ಷಣದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ 28 ವರ್ಷದ ತೇಜಸ್ವಿ ಸೂರ್ಯ ಅವರ ವಿರುದ್ಧ ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಹಾಗೂ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಯುವಕ ಬಿಜೆಪಿಯ ಮತ್ತೊಬ್ಬ ಎಂ.ಜೆ.ಅಕ್ಬರ್ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ.
ತೇಜಸ್ವಿ ಸೂರ್ಯ ವಿರುದ್ಧ ಪಕ್ಷದ ಕೆಲ ಪ್ರಮುಖ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿರುವ ಮಧ್ಯೆ ಡಾ. ಸೋಮ್ ದತ್ತಾ ಎಂಬ ಮಹಿಳೆ ಸಾಮಾಜಿಕ ತಾಣದಲ್ಲಿ ತೇಜಸ್ವಿ ಸೂರ್ಯ ನಡುವಿನ ಸಂಬಂಧವನ್ನು ಬಹಿರಂಗಗೊಳಿಸಿದ್ದು, ಆತ 23 ವರ್ಷ ವಯಸ್ಸಿನವನಿದ್ದಾಗಿನಿಂದ ನಮ್ಮಿಬ್ಬರ ನಡುವೆ ಪ್ರೀತಿ ಇತ್ತು ಟ್ವೀಟ್ ಮಾಡಿದ್ದಾರೆ.
ತೇಜಸ್ವಿ ಸೂರ್ಯ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದವರೊಬ್ಬರಿಗೆ ಪ್ರತಿಕ್ರಿಯಿಸಿದ ಸೋಮ್ ದತ್ತಾ, ಮಹಿಳೆಯನ್ನು ಶೋಷಿಸುವ ಹಾಗೂ ಹೆಣ್ಣಿನ ಮೇಲೆ ಹಲ್ಲೆ ಮಾಡುವ ವ್ಯಕ್ತಿ ನಮ್ಮ ನಾಯಕನಾಗಲು ನೀವು ಬಯಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಪ್ರತಿಯೊಬ್ಬ ಹಿಂದೂ ಸಹ ಧಾರ್ಮಿಕ ವ್ಯಕ್ತಿಯಲ್ಲ ಹಾಗೂ ಆತನ ಭಾಷಣಗಳು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದಿಲ್ಲ ಎಂದು ಹೇಳಿರುವ ಸೋಮ್ ದತ್ತಾ, ನಿಮಗೆ ಸಾಕ್ಷಿ ಬೇಕಾದರೆ ನಾನು ಒದಗಿಸುತ್ತೇನೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರಿಗೂ ಪ್ರತಿಕ್ರಿಯಿಸಿರುವ ಸೋಮ್ ದತ್ತಾ, ಆತನಿಗೆ ನಾನು ಮೊದಲ ಸಂತ್ರಸ್ತೆಯಲ್ಲ ಅಥವಾ ಕೊನೆಯವಳೂ ಅಲ್ಲ ಎಂದು ಹೇಳಿಕೊಂಡಿದ್ದಾರೆ.
ಸೋಮ್ ದತ್ತಾ ಅವರ ಟ್ವೀಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಾದ ಸ್ವಲ್ಪ ಹೊತ್ತಿನಲ್ಲೇ ಅವರು ಈ ಟ್ವೀಟ್ ಗಳನ್ನು ಅಳಿಸಿ ಹಾಕಿದ್ದರೂ ಅದರ ಸ್ಕ್ರೀನ್ ಶಾಟ್ ಗಳು ಹರಿದಾಡುತ್ತಿವೆ. ಕಾಂಗ್ರೆಸ್ ಅದರ ಸ್ಕ್ರೀನ್ ಶಾಟ್ ಶೇರ್ ಮಾಡಿ ಬಿಜೆಪಿಯ ಮತ್ತೊಬ್ಬ ಎಂ.ಜೆ. ಅಕ್ಬರ್ ಟೀಕಿಸಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ ಸೋಮ್ ದತ್ತಾ ಅವರು ನನಗೆ ಬಹಳ ಗೊತ್ತಿರುವ ಮತ್ತು ಬೇಕಾದ ಸ್ನೇಹಿತರು. ಅವರು ನನ್ನ ವಿರುದ್ಧ ಮಾಡಿದ್ದ ಟ್ವೀಟ್ ಅನ್ನು ಅವರೇ ಡಿಲೀಟ್ ಮಾಡಿದ್ದಾರೆ. ಈ ವಿಷಯ ಮುಂದುವರಿಸಬಾರದು ಅಂತ ಕೇಳಿಕೊಂಡಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ನಾನು ಇದನ್ನು ಮುಂದುವರೆಸುವುದಿಲ್ಲ. ಮಾಧ್ಯಮಗಳು ಸಹ ಮುಂದುವರೆಸಬಾರದು ಎಂದು ಮನವಿ ಮಾಡಿದ್ದಾರೆ.