ರಾಗಿಹಳ್ಳಿ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಬೆಂಗಳೂರಿನಿಂದ 50 ಕಿಲೋ ಮೀಟರ್ ದೂರದಲ್ಲಿರುವ ರಾಗಿಹಳ್ಳಿ ನಿವಾಸಿಗಳಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ದಿವಂಗತ ಸಂಸದ ಹೆಚ್ ಎನ್ ಅನಂತ್ ಕುಮಾರ್ ಅವರೇ ಈಗಲೂ ಸಂಸದರು.
ಈ ಹಳ್ಳಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬಂದರೂ ಇಲ್ಲಿನ ನಿವಾಸಿಗಳು ಮಾತ್ರ ಅನಂತ್ ಕುಮಾರ್ ರೇ ರಾಷ್ಟ್ರಮಟ್ಟದ ನಮ್ಮ ಪ್ರತಿನಿಧಿ ಎಂಬ ಭಾವನೆಯಲ್ಲಿದ್ದಾರೆ. ಕಾರಣ, 2014ರಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಅನಂತ್ ಕುಮಾರ್ ಈ ಗ್ರಾಮವನ್ನು ದತ್ತುಪಡೆದುಕೊಂಡು ಅಭಿವೃದ್ಧಿಗೊಳಿಸಿದ್ದಾರೆ.
ರಾಗಿಹಳ್ಳಿಯಲ್ಲಿನ ಪ್ರತಿಯೊಂದು ಮನೆಗಳೂ ಶೌಚಾಲಯ, ಕಾಂಕ್ರೀಟ್ ರಸ್ತೆ ಹೊಂದಿದ್ದು, ಕುಡಿಯುವ ನೀರಿನ ಘಟಕವಿದೆ. ಸರ್ಕಾರಿ ಶಾಲೆ, ರಾಷ್ಟ್ರೀಕೃತ ಬ್ಯಾಂಕು, ಉತ್ತಮ ಮೂಲಸೌಕರ್ಯಗಳಿಂದ ಕೂಡಿದ ಪಂಚಾಯಿತಿ ಕಚೇರಿ, ಎಟಿಎಂ, ಡೈರಿ ಇದ್ದು, ಎಲ್ಲಿಯೂ ಕಸ ಕಂಡುಬರುವುದಿಲ್ಲ.