ಕರ್ನಾಟಕ

ನಿಖಿಲ್ ನಾಮಪತ್ರ ವಿವಾದ ಮುಗಿದ ಅಧ್ಯಾಯ, ಸ್ಪರ್ಧೆಗೆ ಯಾವುದೇ ತೊಂದರೆ ಇಲ್ಲ: ಸಂಜೀವ್ ಕುಮಾರ್

Srinivas Rao BV
ಮಂಡ್ಯ: ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಕೊನೆಗೊಂಡಿದೆ. ಉಮೇದುವಾರಿಕೆ ಅಂಗೀಕಾರವಾಗಿರುವುದರಿಂದ ಮಂಡ್ಯ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ವಿವಾದ ಮುಗಿದ ಅಧ್ಯಾಯ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ. 
ನಿಖಿಲ್ ಅವರ ನಾಮಪತ್ರವನ್ನು ಚುನಾವಣಾ ಕಾನೂನುಗಳಿಗೆ ವಿರುದ್ಧವಾಗಿ ಅಂಗೀಕಾರ ಮಾಡಿರುವ ಕುರಿತಂತೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣಾಧಿಕಾರಿಗಳಿಗೆ ನೀಡಿರುವ ದೂರಿಗೆ ಸಂಬಂಧಿಸಿದಂತೆ ದಿಢೀರ್ ಮಂಡ್ಯಗೆ ಆಗಮಿಸಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಅಭ್ಯರ್ಥಿಯ ಸ್ಪರ್ಧೆಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಸಂಬಂಧಪಟ್ಟವರು ಬೇಕಿದ್ದರೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸಬಹುದು ಎಂದು ಹೇಳಿದ್ದಾರೆ.  
ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರ ನಾಮಪತ್ರ ಅಂಗೀಕಾರ ವಿಚಾರದಲ್ಲಿ ನಡೆದಿರುವ ಆಡಳಿತಾತ್ಮಕ ಲೋಪದ ಬಗ್ಗೆ ತನಿಖೆ ನಡೆಸುವುದಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ. 
ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ಮಂಜುಶ್ರಿ ಅವರು ನಾಮಪತ್ರ ಸ್ವೀಕಾರ ವಿಚಾರದಲ್ಲಿ ಏಕ ಪಕ್ಷೀಯವಾಗಿ ನಡೆದುಕೊಂಡಿರುವ ಕುರಿತಂತೆ ಮಾಹಿತಿ ಪಡೆಯಲಾಗಿದ್ದು, ಒಟ್ಟಾರೆ ಆಡಳಿತಾತ್ಮಕ ವೈಫಲ್ಯದ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. 
ಇನ್ನು ಮುಂದೆ ಅಭ್ಯರ್ಥಿಯ ನಾಮಪತ್ರ ಅಂಗೀಕಾರಕ್ಕೆ ಸಂಬಂಧಿಸಿದಂತೆ  ಏನೇ ತಕರಾರು ಇದ್ದರೂ ನ್ಯಾಯಾಲಯದ ಮೊರೆ ಹೋಗಿ ಕಾನೂನು ಹೋರಾಟ ನಡೆಸಬಹುದು. ಏಕಪಕ್ಷೀಯ ನಡೆ ವಿಚಾರವನ್ನು ಗಮನಕ್ಕೆ ತೆಗೆದುಕೊಳ್ಳಲಾಗಿದ್ದು, ಆಡಳಿತಾತ್ಮಕ ಲೋಪದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿದೆ ಎಂದು ಸಂಜೀವ್ ಕುಮಾರ್ ಹೇಳಿದರು. 
ನಾಮಪತ್ರ ಪರಿಶೀಲನೆಯ ವಿಡಿಯೋ ನೀಡುವಂತೆ ಸುಮಲತಾ ಅವರು ಜಿಲ್ಲಾ ಚುನಾವಣಾಧಿಕಾರಿ ಅವರನ್ನು ಕೋರಿದ್ದರು. ಆದರೆ ಅವರು ಅರ್ಧ ವಿಡಿಯೋವನ್ನು ಮಾತ್ರ ನೀಡಿದ್ದು, ವಿಡಿಯೋ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಗೊಂದಲ ಸೃಷ್ಠಿಯಾದ ಹಿನ್ನೆಲೆಯಲ್ಲಿ ಖುದ್ಧು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಮಾಹಿತಿ ಪಡೆದರು. 
ಇದೇ ಸಂದರ್ಭದಲ್ಲಿ ಬಿಎಸ್ ಪಿ ಅಭ್ಯರ್ಥಿ ನಂಜುಂಡ ಸ್ವಾಮಿ ಸಹ ಆಗಮಿಸಿದ್ದು, ಕ್ರಮ ಸಂಖ್ಯೆ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ. ಯಾವ ಮಾನದಂಡ ಆಧರಿಸಿ, ಕ್ರಮ ಸಂಖ್ಯೆ ಹಂಚಿಕೆ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಇದರಿಂದ ತಮಗೆ ಅನ್ಯಾಯವಾಗಿದ್ದು, ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
SCROLL FOR NEXT