ಕರ್ನಾಟಕ

ಕುಂದಗೋಳ ಬಂಡಾಯ ಅಭ್ಯರ್ಥಿಗಳ ನಾಮಪತ್ರ ವಾಪಸ್: ಕಾಂಗ್ರೆಸ್ ಜಯದ ಹಾದಿ ಸಲೀಸು!

Shilpa D
ಬೆಂಗಳೂರು: ಕುಂದಗೋಳ ವಿಧಾನಸಭೆ ಉಪಚುನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲವೆಂದು ಪಕ್ಷದ ವಿರುದ್ಧ ಬಂಡೆದ್ದು ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ.
ನಾಮಪತ್ರ ವಾಪಸ್ ಪಡೆದಿರುವ ಬಂಡಾಯ ಅಭ್ಯರ್ಥಿಗಳು ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ,
ಮಾಜಿ ಶಾಸಕ ಗೋವಿಂದಪ್ಪ ಜುಟ್ಟಾಳ್ ಪುತ್ರ ಚಂದ್ರಶೇಖರ್ ಜುಟ್ಟಾಳ್, ಸುರೇಶ್ ಸವಣೂರು,  ವಿಶ್ವನಾಥ್ ಕುಬಿಹಾಳ್, ಶಿವಾನಂದ ಬೆಂಟೂರ್ ಮತ್ತು ಗುರುನಾಥ್ ಗೋರ್ಪಡೆ ತಮ್ಮ ನಾಮಪತ್ರ ಸಲ್ಲಿಸಿದ್ದರು.
ಗುರುವಾರ ಬೆಳಗ್ಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪಾಟೀಲ್ ಎಲ್ಲಾ ಬಂಡಾಯ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವ ವಿಶ್ವಾಸ ವ್ಯಕ್ತ ಪಡಿಸಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಆರ್ .ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಎಚ್.ಕೆ. ಪಾಟೀಲ್,ಮತ್ತು ಜೆಡಿಎಸ್ ನಾಯಕರಾದ ಬಸವರಾಜ ಹೊರಟ್ಟಿ ಇಂದು ನಡೆಯುವ ರ್ಯಾಲಿಯಲ್ಲಿ ಪಾಲ್ಗೋಳ್ಳಲಿದ್ದಾರೆ.
ಕಣದಲ್ಲಿ 50 ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಬಂಡಾಯಗಾರರು ನಾಮಪಕ್ರ ವಾಪಸ್ ಪಡೆದು ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾಂಗ್ರೆಸ್ ನ ಕುಸುಮಾವತಿ ಶಿವಳ್ಳಿ ಮತ್ತು ಬಿಜೆಪಿಯ ಎಸ್ ಚಿಕ್ಕನಗೌಡರ್ ಮಧ್ಯೆ ನೇರ ಹಣಾಹಣಿ ಏರ್ಪಡಲಿದೆ.
ಕಳೆದ ಬಾಕಿ ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ 600 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇನ್ನೂ ಚಿಂಚೋಳಿಯಲ್ಲಿ ಡಾ, ಅವಿನಾಶ್ ಜಾಧವ್ ಮತ್ತು ಕಾಂಗ್ರೆಸ್ ನ ಸುಭಾಷ್ ರಾಥೋಡ್ ಮಧ್ಯೆ ನೇರ ಹಣಾಹಣಿ ಏರ್ಪಡಲಿದೆ.
SCROLL FOR NEXT