ಕರ್ನಾಟಕ

ಫಲಿತಾಂಶ ಬರೋವರೆಗೆ ಯಾರೇನೇ ಹೇಳಿದರೂ ವ್ಯರ್ಥ: ಜಿಟಿ ದೇವೇಗೌಡ

Raghavendra Adiga
ಮೈಸೂರು: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ತಾವು ಯಾವುದೇ ಸಂದರ್ಭದಲ್ಲಿ ಟೀಕೆ ಮಾಡಿಲ್ಲ. ಅವರ ಮೇಲೆ ಅಪಾರ ಗೌರವ ಇದೆ. ನಮ್ಮ ಪಕ್ಷದ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಟ್ವೀಟ್ ಮಾಡಿದ್ದಾರಂತೆ. ಆದರೇ ಅದನ್ನು ನಾನು ನೋಡಿಲ್ಲ. ಈ ಮೊದಲು ಜಿಟಿ ದೇವೇಗೌಡ ತಮ್ಮ ಬಗ್ಗೆ ಮಾತನಾಡಿದ್ದರು, ಈಗ ಎಚ್.ವಿಶ್ವನಾಥ್ ಮಾತನಾಡಿರುವುದಾಗಿ ಟ್ವೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ ಅವರೇನು ವಿಧಾನ ಸಭೆಗೆ ಮಧ್ಯಂತರ ಚುನಾವಣೆ ಹೋಗುವ ಬಗ್ಗೆ ಮಾತನಾಡಿಲ್ಲ. ಅವರು ಯಾಕೆ ನನ್ನ ಹೆಸರು ಹೇಳಿದ್ದಾರೋ ಎಂಬುದು ತಮಗೆ ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ವಿರುದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಜನಪ್ರತಿನಿಧಿಗಳು ಜವಾಬ್ದಾರಿಯಿಂದ ಮಾತನಾಡಬೇಕು. ಸಿದ್ದರಾಮಯ್ಯನವರೇ 5 ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಹೀಗಿರುವಾಗ ಬೇರೆ ಮಾತು ಏಕೆ. ವಿಶ್ವನಾಥ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿಬಾರದು. 23ರ ಫಲಿತಾಂಶ ಬರುವವರೆಗೂ ಎಲ್ಲರ ಹೇಳಿಕೆಗಳಿಗೆ ಯಾವುದೇ ಮಾನ್ಯತೆ ಇಲ್ಲ, ಯಾರು ಏನೇ ಹೇಳಿಕೆ ಕೊಟ್ಟರೂ ಫಲಿತಾಂಶ ಬರೋವರೆಗೆ ಎಲ್ಲವು ವ್ಯರ್ಥವಾಗಲಿದೆ ಎಂದು ಜಿ.ಟಿ ದೇವೇಗೌಡ ತಿಳಿಸಿದರು.
ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ದೇವಸ್ಥಾನ ಯಾತ್ರೆ ಬಗ್ಗೆ ಟೀಕಿಸಿದ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ ಸಚಿವ ಜಿ.ಟಿ ದೇವೇಗೌಡ, ದೇವಸ್ಥಾನಕ್ಕೆ ತೆರಳಲು ಟೀಕೆ ಟಿಪ್ಪಣೆ ಏಕೆ? ಈ ಹಿಂದೆ ಇವರ್ಯಾರು ದೇವಸ್ಥಾನಕ್ಕೆ ಹೋಗಿಲ್ಲವೇ? ಮುಖ್ಯಮಂತ್ರಿ ಆಗಿದ್ದಾಗ ಎಲ್ಲರೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಯಾಕೆ ಯಡಿಯೂರಪ್ಪ ಹೋಗಿಲ್ಲವೇ ಎಂದು ಅವರು ಪ್ರಶ್ನಿಸಿದರು.
ಮನಸ್ಸಿಗೆ ಬಂದಾಗ ದೇವಾಲಯಕ್ಕೆ ಹೋಗುತ್ತಾರೆ. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ. ಬರಗಾಲ ಜನರಿಗೆ ಕುಡಿಯುವ ನೀರಿಲ್ಲ, ಮೇವಿಲ್ಲ ಅಂತ ಟೀಕಿಸಲಿ. ಅದು ಬಿಟ್ಟು ಬೇರೆ ಮಾತು ಬೇಡ. ಜನಪ್ರತಿನಿಧಿಗಳು ಅದರಲ್ಲೂ ಪ್ರತಿಪಕ್ಷದ ನಾಯಕರು ಈ ಬಗ್ಗೆ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಜಿ.ಟಿ ದೇವೇಗೌಡ ಚಾಟಿ ಬೀಸಿದರು
SCROLL FOR NEXT