ಬೆಂಗಳೂರು, ದೇಶದಲ್ಲಿ ಮೋದಿ ಅಲೆ ಇದೆ ಎಂಬ ಭಾವನೆ ಮೂಡಿಸಲು ಬಿಜೆಪಿ ಚುನಾವಣೋತ್ತರ ಸಮೀಕ್ಷೆಯನ್ನು ಬಳಸಲು ಪ್ರಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕೇಂದ್ರದಲ್ಲಿ ಮುಂದಿನ ಸರ್ಕಾರ ರಚಿಸಲು ಸೀಟು ಕೊರತೆಯಾದರೆ ಸಣ್ಣ ಪುಟ್ಟ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಈ ಸಮೀಕ್ಷೆಯ ಮೂಲಕ ಬಿಜೆಪಿ ಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕರ್ನಾಟಕದಲ್ಲಿ ಜೆಡಿಎಸ್‍ಗೆ ಹೆಚ್ಚಿನ ಸ್ಥಾನಗಳನ್ನು ನೀಡದ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಈ ಬಗ್ಗೆ ಟ್ವೀಟ್ ಮಾಡಿ, ಕೃತಕವಾಗಿ ವಿನ್ಯಾಸಗೊಳಿಸಿದ ಅಥವಾ ತಯಾರಿಸಿದ ಮೋದಿ ಅಲೆಗಳ ಮೂಲಕ ಮೇ 23ರ ಫಲಿತಾಂಶದ ಬಳಿಕ ಸರ್ಕಾರ ರಚಿಸಲು ಸ್ಥಾನಗಳ ಕೊರತೆ ಉಂಟಾದಾಗ ಮುಂಚಿತವಾಗಿ ಪ್ರಾದೇಶಿಕ ಪಕ್ಷಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಅವರು ಸೋಮವಾರ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಇಡೀ ರಾಜಕೀಯ ವಿರೋಧ ಪಕ್ಷಗಳು ಪ್ರಧಾನಮಂತ್ರಿಯ ಅಧೀನದಲ್ಲಿ ಇವಿಎಂನ ವಿಶ್ವಾಸಾರ್ಹತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಎಂದು ಅವರು ಹೇಳಿದ್ದಾರೆ.
ಇವಿಎಂನಲ್ಲಿ ಅಕ್ರಮ ಸಾಧ್ಯತೆ ಇರುವುದರಿಂದ ಅದರ ಬದಲಾಗಿ ಸಾಂಪ್ರದಾಯಿಕ ಮತಪತ್ರಗಳ ಮೂಲಕ ಚುನಾವಣೆ ನಡೆಸುವಂತೆ ವಿರೋಧ ಪಕ್ಷಗಳು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಸಂದರ್ಭದಲ್ಲೇ ಕುಮಾರಸ್ವಾಮಿ ಈ ಟ್ವೀಟ್ ಮಾಡಿದ್ದಾರೆ.