ಕ್ಷೇತ್ರಗಳು

ಮಾತಿಲ್ಲದ ನಡೆಗೆ ಗಂಭೀರದ ಹಾರ

ಯಾವಾಗಲೂ ಹಸನ್ಮುಖರಾಗಿರುವ, ತಮ್ಮ ಸುತ್ತಮುತ್ತಲಿರುವವರನ್ನು..

ಕನ್ನಡಪ್ರಭ ವಾರ್ತೆ | ಮೈಸೂರು | ಏ.2-
ಯಾವಾಗಲೂ ಹಸನ್ಮುಖರಾಗಿರುವ, ತಮ್ಮ ಸುತ್ತಮುತ್ತಲಿರುವವರನ್ನು ಜೋಕು ಹೇಳಿ ನಗಿಸುವ ಸ್ವಭಾವದ ಸಂಸದ ಎಚ್.ವಿಶ್ವನಾಥ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಅವರ ಮುಖದಲ್ಲಿ ನಗು ಸ್ವಲ್ಪ ಮಟ್ಟಿಗೆ ಮಾಯವಾಗಿತ್ತು. ಬದಲಿಗೆ ರಾಜಕೀಯ ತಂತ್ರಗಾರಿಕೆಯ ನಡಿಗೆಯೇ ಜೋರಾಗಿತ್ತು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್. ವಿಶ್ವನಾಥ್ ಅವರು ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಯುಗಾದಿ ಹಬ್ಬದ ವರ್ಷತೊಡಕು ದಿನವಾದ ಮಂಗಳವಾರ ಎಚ್. ವಿಶ್ವನಾಥ್ ಅವರೊಂದಿಗೆ 'ಕನ್ನಡಪ್ರಭ'ವು ಮುಂಜಾನೆಯಿಂದ ರಾತ್ರಿವರೆಗೂ ಹೆಜ್ಜೆ ಹಾಕಿದಾಗ ಹಲವಾರು ಸಂಗತಿಗಳು ಕಂಡು ಬಂದವು.
ಇಡೀ ದಿನ ರಾಜಕೀಯ ತಂತ್ರಗಾರಿಕೆ ಮುಂದುವರಿಸಿದ ವಿಶ್ವನಾಥ್ ಅವರಲ್ಲಿ ಎಲ್ಲೂ ಉತ್ಸಾಹ ಮಾತ್ರ ಕಡಿಮೆ ಆಗಿರಲಿಲ್ಲ. ಪ್ರಚಾರದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು.
ವಿಶ್ವನಾಥ್ ಕೆ.ಆರ್. ನಗರದಿಂದ ಬೆಳಗ್ಗೆ 7ಕ್ಕೆ ಮೈಸೂರಿಗೆ ಆಗಮಿಸಿದರು. ಶ್ವೇತವರ್ಣದ ಶರ್ಟ್, ಪ್ಯಾಂಟ್ ಧರಿಸಿದ್ದರು. ಬೆಳಗ್ಗೆ 7.15ಕ್ಕೆ ಕುವೆಂಪುನಗರ ಮಧುವನ, ಲಿಂಗಾಂಬುದಿಪಾಳ್ಯದಲ್ಲಿ ವಾಯುವಿಹಾರಕ್ಕೆ ಬಂದವರನ್ನು ಭೇಟಿಯಾಗಿ ಮತಯಾಚಿಸಿದರು. 7.45ಕ್ಕೆ ಕುವೆಂಪುನಗರ ಶಾಂತಿಸಾಗರ್ ಹೊಟೇಲ್ ಬಳಿಯ ವೃತ್ತದಲ್ಲಿ ಮತಯಾಚಿಸಿದರು. ಬೆಳಗ್ಗೆ 8.15ಕ್ಕೆ ಬೋಗಾದಿ 2ನೇ ಹಂತದಲ್ಲಿರುವ ಅಳಿಯ ಕಾಂತರಾಜು ಮನೆಯಲ್ಲಿ ತಿಂಡಿ ಮುಗಿಸಿ, ಯುವ ಮುಖಂಡರೊಂದಿಗೆ ಹಾಗೂ 9.30ಕ್ಕೆ ಸರಸ್ವತಿಪುರಂನಲ್ಲಿ ಸ್ನೇಹಿತರು, ಪ್ರಗತಿಪರರೊಂದಿಗೆ ಚರ್ಚೆ ನಡೆಸಿದರು.
ಮಾತು, ಊಟ, ನಿದ್ದೆ: 10.30ಕ್ಕೆ ಸ್ಥಳೀಯ ಖಾಸಗಿ ವಾಹಿನಿ ಕಚೇರಿಗೆ ಭೇಟಿ ನೀಡಿದ್ದರು. ಮಧ್ಯಾಹ್ನ 12.50ಕ್ಕೆ ಸಿದ್ದಾರ್ಥ ನಗರದಲ್ಲಿರುವ ಸಾಹುಕಾರ್ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎನ್. ಮಂಜುನಾಥ್ ಅವರ ನಿವಾಸದಲ್ಲಿ ಶಾಸಕ ತನ್ವೀರ್ ಸೇಠ್ ಅವರೊಂದಿಗೆ ಎನ್.ಆರ್. ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ಬಗ್ಗೆ ಚರ್ಚಿಸಿದರು. ಮಧ್ಯಾಹ್ನ 2.15ಕ್ಕೆ ಕೃಷ್ಣಮೂರ್ತಿಪುರಂನಲ್ಲಿರುವ ಚಿಕ್ಕಮ್ಮ, ಮಾಜಿ ಉಪ ಮೇಯರ್ ಟಿ. ಶಾರದಮ್ಮ ಅವರ ಮನೆಗೆ ತೆರಳಿದರು. 2.30ಕ್ಕೆ ಮುದ್ದೆ ಊಟ ಮಾಡಿದರು. ಮಧ್ಯಾಹ್ನ 3ಕ್ಕೆ ಸೋಫಾದಲ್ಲಿ ಕುಂತಲ್ಲೇ ಚುಟುಕು ನಿದ್ದೆ ಮಾಡಿ, ನಂತರ ಅಲ್ಲಿಗೆ ಬಂದ ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿದರು.  ಸಂಜೆ 4.15ಕ್ಕೆ ಶಾಸಕ ವಾಸು ಅವರ ನಿವಾಸದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮುಖಂಡರೊಂದಿಗೆ ಸಭೆ ನಡೆಸಿದರು.
ಸಮಾಲೋಚನೆ: ಸಂಜೆ 6.20ಕ್ಕೆ ನಜರ್‌ಬಾದ್ ವೆಂಕಟಲಿಂಗಯ್ಯ ಬಡಾವಣೆಯಲ್ಲಿ ನಡೆದ ಎನ್.ಆರ್. ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದರು. ಸಂಜೆ 7.50ಕ್ಕೆ ಗೌಪ್ಯ ಸ್ಥಳದಲ್ಲಿ ದಲಿತ ಸಂಘರ್ಷ ಸಮಿತಿಯ ಎಲ್ಲ ಬಣಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದರು.
ರಾತ್ರಿ 9ಕ್ಕೆ ಶಾಸಕ ವಾಸು ಅವರ ಮನೆಯಲ್ಲಿ ಮಾಜಿ ಮೇಯರ್, ಉಪ ಮೇಯರ್, ಪಾಲಿಕೆ ಸದಸ್ಯರ ಸಭೆಯಲ್ಲಿ ಪಾಲ್ಗೊಂಡರು. ರಾತ್ರಿ 10ರಿಂದ 11.15 ರವರೆಗೆ ನರಸಿಂಹರಾಜ, ಕೃಷ್ಣರಾಜ ಮತ್ತು ಚಾಮರಾಜ ಕ್ಷೇತ್ರದ ಮುಖಂಡರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.
ರಾತ್ರಿ 11.30ಕ್ಕೆ ಅರವಿಂದನಗರದಲ್ಲಿ ಮನೆಗೆ ತೆರಳಿ ಅಲ್ಲಿ ನೆರೆದಿದ್ದ ಮುಖಂಡರನ್ನು ಭೇಟಿಯಾಗಿ ಚರ್ಚಿಸಿದರು. ನಂತರ ಊಟ ಮುಗಿಸಿ ಮಲಗುವ ಹೊತ್ತಿಗೆ ಮಧ್ಯರಾತ್ರಿ 1 ಆಗಿತ್ತು.
ಮೊಬೈಲ್ ಕಾಟ
ಪ್ರತಿ ಕ್ಷಣವು ಒಂದಲ್ಲ ಒಂದು ಮೊಬೈಲ್ ರಿಂಗಣಿಸುತ್ತದೆ. ಎಲ್ಲರನ್ನೂ ವಿಶ್ವಾಸದಿಂದಲೇ ವಿಶ್ವನಾಥ್ ಮಾತನಾಡಿಸುತ್ತಿದ್ದರು. ತಾವೇ ಯಾರಿಗಾದರೂ ಫೋನ್ ಮಾಡಿದರೆ ನಾನು ವಿಶ್ವನಾಥ್ ಮಾತನಾಡುತ್ತಿದ್ದೇನೆ ಎನ್ನುತ್ತಿದ್ದರು. ಪ್ರತಿ ಕ್ಷಣವು ಸಂಸದರ, ಅವರ ಸಹಾಯಕರು ಮತ್ತು ಬೆಂಬಲಿಗರ ಮೊಬೈಲ್ ರಿಂಗಣಿಸುತ್ತಿತ್ತು. ಸಾಧ್ಯವಾದಷ್ಟು ಕರೆಗಳನ್ನು ಸ್ವೀಕರಿಸಿ ವಿಶ್ವನಾಥ್ ಅವರೇ ಮಾತನಾಡುತ್ತಿದ್ದರು.

ಮುಂಜಾನೆಯಿಂದ ಮಧ್ಯರಾತ್ರಿವರೆಗೂ ಹಲವೆಡೆ ಭೇಟಿ
ಪ್ರತಿ ಕ್ಷಣವು ರಿಂಗಣಿಸುವ ಮೊಬೈಲ್
ಆದರೂ ಮುಖದಲ್ಲಿ ಉಲ್ಲಾಸ

ವಿಶ್ವನಾಥ್ ದಿನಚರಿ
- ಬೆಳಗ್ಗೆ
6.00        ಕೆ.ಆರ್. ನಗರ ಮನೆಯಿಂದ ಪ್ರಯಾಣ
7.00        ಮೈಸೂರಿಗೆ ಆಗಮನ
7.15        ಹಲವೆಡೆ ವಾಯುವಿಹಾರಿಗಳ ಬಳಿ ಮತಯಾಚನೆ
8.15        ಅಳಿಯ ಕಾಂತರಾಜು ಮನೆಯಲ್ಲಿ ತಿಂಡಿ
9.30        ಸರಸ್ವತಿಪುರಂನಲ್ಲಿ ಸ್ನೇಹಿತರು, ಪ್ರಗತಿಪರರೊಂದಿಗೆ ಚರ್ಚೆ
- ಮಧ್ಯಾಹ್ನ
12.50    ಶಾಸಕ ತನ್ವೀರ್ ಸೇಠ್ ಜತೆ ಚರ್ಚೆ
2.15        ಚಿಕ್ಕಮ್ಮ ಶಾರದಮ್ಮ ಮನೆಯಲ್ಲಿ ಮುದ್ದೆ ಊಟ
3.00        ಚುಟುಕು ನಿದ್ದೆ
3.30        ಮುಸ್ಲಿಂ ಮುಖಂಡರೊಂದಿಗೆ ಚರ್ಚೆ
- ಸಂಜೆ
4.15        ಶಾಸಕ ವಾಸು ಮನೆಯಲ್ಲಿ ಸಭೆ
7.50        ಗೌಪ್ಯ ಸ್ಥಳದಲ್ಲಿ ದಸಂಸ ಮುಖಂಡರ ಜತೆ ಮಾತು
- ರಾತ್ರಿ 10 ರಿಂದ 11.15
        ನರಸಿಂಹರಾಜ, ಕೃಷ್ಣರಾಜ, ಚಾಮರಾಜ ಕ್ಷೇತ್ರದ ಮುಖಂಡರ ಜತೆ ಪ್ರತ್ಯೇಕ ಸಭೆ.
- ಮಧ್ಯರಾತ್ರಿ- 1ಕ್ಕೆ ನಿದ್ರೆ



- ಬಿ. ಶೇಖರ್ ಗೋಪಿನಾಥಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!