ಬಿಜೆಪಿಯ ಭದ್ರಕೋಟೆ ಎನ್ನಲಾಗುವ ಬಾಗಲಕೋಟೆಯಲ್ಲಿ ಸದ್ಯ 6 ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ನಿಧಾನವಾಗಿ ಚುನಾವಣೆ ರಂಗೇರುತ್ತಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಉತ್ಸಾಹದಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮತ್ತೊಮ್ಮೆ ಆಯ್ಕೆ ಬಯಸಿ ಬಿಜೆಪಿಯಿಂದ ಗದ್ದಿಗೌಡರ್ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ನಲ್ಲಿ ಗೊಂದಲಗಳ ನಡುವೆ ಟಿಕೆಟ್ ಪಡೆಯುವಲ್ಲಿ ಅಜಯಕುಮಾರ ಸರನಾಯಕ ಯಶಸ್ವಿಯಾಗಿದ್ದಾರೆ. ಇನ್ನು ಜೆಡಿಎಸ್ನಿಂದ ರವಿ ಹುಣಶ್ಯಾಳ ಕಣದಲ್ಲಿದ್ದಾರೆ.
- ಹ್ಯಾಟ್ರಿಕ್ ಹಾದಿಗೆ ಯಾರಾದರೂ ಅಡ್ಡಗಾಲು ಹಾಕ್ತಾರೆಯೇ ?
ಬಾಗಲಕೋಟೆ ಮೊದಲಿನಿಂದಲೂ ಬಿಜೆಪಿ ಭದ್ರಕೋಟೆ. ಈ ಬಾರಿ ವಾತಾವರಣ ಸಲೀಸಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿ, ಬೆಲೆ ಹೆಚ್ಚಳ ತಡೆಗಟ್ಟದೇ ಇರುವುದು ಶ್ರೀಸಾಮಾನ್ಯರಲ್ಲಿ ಆಕ್ರೋಶ ಮೂಡಿಸಿದೆ. ದೇಶದ ಗಡಿ ಕಾಯುವ ಯೋಧರನ್ನು ರಕ್ಷಿಸಲು ಯುಪಿಎ ಸರ್ಕಾರದಿಂದ ಸಾಧ್ಯವಾಗಲಿಲ್ಲ. ನೆರೆ ರಾಷ್ಟ್ರಗಳು ನಮ್ಮ ಸೈನಿಕರ ಪ್ರಾಣ ತೆಗೆಯುವ ಕೆಲಸ ಮಾಡುತ್ತಿವೆ. ಬಾಂಗ್ಲಾ, ಚೀನಾದಿಂದ ನುಸುಳುಕೋರರು ಆಗಮಿಸುತ್ತಿದ್ದಾರೆ. ದೇಶ ಕಾಯುವ ಕೆಲಸವನ್ನು ಕಾಂಗ್ರೆಸ್ ಮರೆತಿದ್ದು ಇದು ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯಕವಾಗುತ್ತದೆ.
- ಬಿಜೆಪಿ ಭದ್ರಕೋಟೆ ಅಂತೀರಿ, ಇಲ್ಲಿ ಏಳು ಮಂದಿ ಕಾಂಗ್ರೆಸ್ ಶಾಸಕರು ಇದ್ದಾರಲ್ಲಾ ?
ಕಾಂಗ್ರೆಸ್ಗಂತೂ ನಮ್ಮನ್ನು ಸೋಲಿಸಲಿಕ್ಕೆ ಆಗೋದಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಒಂದಿಷ್ಟು ಮನಸ್ತಾಪ ಆಗಿ ನಮ್ಮವರು ಸೋತರು. ಆದ್ರೂ ಕಾರ್ಯಕರ್ತರು ಮಾತ್ರ ಎಲ್ಲಿಯೂ ಹೋಗದೆ ಹಾಗೆಯೇ ಉಳಿದುಕೊಂಡಿದ್ದಾರೆ. ಅವರಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ತುಂಬುವ ಕೆಲಸವಾಗಿದೆ. ಇದಲ್ಲದೆ ಮೂರು ಮಂದಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ ಅವರು ಬಾಗಲಕೋಟೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರಲಿದ್ದು ಬಿಜೆಪಿ ಗೆಲವಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.
- ಲಿಂಗಾಯಿತರು ವರ್ಸೆಸ್ ರಡ್ಡಿ ಎಂಬ ಮಾತಿಗೆ ನಿಮ್ಮ ಅಭಿಪ್ರಾಯ?
ಕ್ಷೇತ್ರದಲ್ಲಿ ಎರಡೇ ಜಾತಿಗಳಿಲ್ಲ. ಆ ರೀತಿ ಒಂದೇ ಜಾತಿ ನಂಬಿ ಚುನಾವಣೆ ಎದುರಿಸಲು ಬರುವುದಿಲ್ಲ. ಮತಗಳನ್ನು ಒಡೆಯುವ ಕಾರಣಕ್ಕೆ ಇಂತಹದ್ದೊಂದು ಸ್ಲೋಗನ್ ಬಿಜೆಪಿಯೇತರ ಪಕ್ಷಗಳು ಹುಟ್ಟು ಹಾಕುತ್ತವೆ. ಪಕ್ಷದ ಪ್ರಧಾನಿ ಅಭ್ಯರ್ಥಿ ಮೋದಿ ಕೂಡಾ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.
- ಜನರ ಮುಂದೆ ಯಾವ ಅಂಶ ಇಟ್ಟುಕೊಂಡು ಮತ ಯಾಚಿಸುತ್ತೀರಾ
ಮೂರನೇ ಬಾರಿ ನಾನು ಲೋಕಸಭೆ ಪ್ರವೇಶಿಸಲು ಸಜ್ಜಾಗಿದ್ದೇನೆ. ಯಾವುದೇ ಬಗೆಯ ಹಿಂಜರಿಕೆ ಇಲ್ಲದೆ ಚುನಾವಣೆ ಗೆಲ್ಲುತ್ತೇನೆ. ಕ್ಷೇತ್ರದ ಜನರೊಂದಿಗೆ ಇಟ್ಟುಕೊಂಡ ನಿರಂತರ ಸಂಪರ್ಕ, ಕಾರ್ಯವೈಖರಿ ಹಾಗೂ ಕೇಂದ್ರದ ಅನುದಾನವನ್ನು ನೇರವಾಗಿ ಜನರಿಗೆ ತಲುಪಿಸಿದ ತೃಪ್ತಿ ನಮಗಿದೆ. ಮೋದಿ ಪರ ಹಾಗೂ ಕಾಂಗ್ರೆಸ್ ವಿರೋಧಿ ಅಲೆ ಇರುವುದರಿಂದ ತಮ್ಮ ಪರವಾಗಿ ಜನ ನಿಲ್ಲುತ್ತಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಒಂದಿಷ್ಟು ಮನಸ್ತಾಪ ಆಗಿ ನಮ್ಮವರು ಸೋತರು. ಆದ್ರೂ ಕಾರ್ಯಕರ್ತರು ಮಾತ್ರ ಎಲ್ಲಿಯೂ ಹೋಗದೆ ಹಾಗೆಯೇ ಉಳಿದುಕೊಂಡಿದ್ದಾರೆ. ಅವರಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ತುಂಬುವ ಕೆಲಸವಾಗಿದೆ.
- ಪಿ.ಸಿ. ಗದ್ದಿಗೌಡರ
--
- ಕ್ಷೇತ್ರದಲ್ಲಿ ರಡ್ಡಿ ವರ್ಸೆಸ್ ಲಿಂಗಾಯಿತರು ಅಂತ ಹವಾ ಇದೆಯೇ?
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾವ ಜಾತಿ ಪ್ರತಿನಿಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ಈ ಮಾತು ಕೇಳಿ ಬರುತ್ತಿರಬಹುದು. ಎಲೆಕ್ಷನ್ ಬಂದ ತಕ್ಷಣ ಜಾತಿ ಲೆಕ್ಕಾಚಾರಗಳು ಗರಿಗೆದರುವುದು ಸಹಜ. ಮೊದಲಿನಿಂದಲೂ ಬಾಗಲಕೋಟೆಯಲ್ಲಿ ಈ ತರಹದ ಮನೋಭಾವಗಳನ್ನು ಕಾಯ್ದುಕೊಂಡು ಬರಲಾಗಿದೆ. ಇಲ್ಲಿ ಮೋದಿಯದ್ದಾಗಲೀ ಅಥವಾ ಜಾತಿ ಹವಾ ಏನೂ ಇಲ್ಲ.
- ಕಾಂಗ್ರೆಸ್ನಲ್ಲಿ ಒಳಜಗಳವಿದ್ದರೂ ಗೆಲ್ಲುವ ಬಗ್ಗೆ ಅದೇನು ಅಷ್ಟು ಕಾನ್ಫಿಡೆನ್ಸ್?
ಬಾಗಲಕೋಟೆ ಮಟ್ಟಿಗೆ ಒಳಜಗಳದ ಪ್ರಶ್ನೆಯೇ ಉದ್ಭವಿಸದು. ಏಳು ಕಾಂಗ್ರೆಸ್ ಶಾಸಕರು ಇಲ್ಲಿಂದ ವಿಧಾನಸಭೆ ಪ್ರವೇಶಿಸಿದ್ದಾರೆ. ಒಟ್ಟಾಗಿ ನಡೆಸಿದ ಪ್ರಯತ್ನದಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ಲೋಕಸಭೆ ಚುನಾವಣೆಗೆ ನಾಲ್ಕಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಒಬ್ಬರಿಗೆ ಮಾತ್ರ ಟಿಕೆಟ್ ನೀಡಲು ಸಾಧ್ಯ. ಹೈಕಮಾಂಡ ನನ್ನನ್ನು ಕಣಕ್ಕಿಳಿಸಿದೆ. ಸಹಜವಾಗಿಯೇ ಉಳಿದವರಿಗೆ ಬೇಸರವಾಗಿರಬಹುದು. ಈಗ ಅದೆಲ್ಲ ಹಳೆಯದಾಗಿದೆ. ಎಲ್ಲರೂ ಸೇರಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತಿದ್ದೇವೆ.
- ನಾಮಪತ್ರ ಸಲ್ಲಿಸುವಾಗ ಆದ ಗದ್ದಲಗಳಿಗೆ ಏನೆನ್ನುತ್ತೀರಿ
ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ಅವರ ಬೆಂಬಲಿಗರು ಅಂದು ಅಸಮಾಧಾನ ಹೊರ ಹಾಕಿ ಸೂಕ್ತ ಸ್ಥಾನಮಾನಕ್ಕೆ ಆಗ್ರಹಿಸಿದರು. ಈ ವಿಚಾರವನ್ನು ಪಕ್ಷದ ವರಿಷ್ಠರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಗಿದೆ. ತಿಮ್ಮಾಪುರ ಬೆಂಬಲಿಗರಿಗೆ ಈ ಸಂಗತಿಯನ್ನು ಮನವರಿಕೆ ಮಾಡಿಕೊಡಲಾಗಿದೆ. ಅಸಮಾಧಾನ ನನ್ನ ವಿರುದ್ಧ ತೋಡಿಕೊಂಡದ್ದಲ್ಲ. ಹಾಗಾಗಿ ಇದು ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ.
- ಕುರುಬ ಸಮಾಜದವರ ಮುನಿಸು ನಿಮ್ಮ ಮೇಲೆ ಇದೆಯೇ?
ಟಿಕೆಟ್ ಹಂಚಿಕೆ ಪೂರ್ವದಲ್ಲಿ ನಮ್ಮ ಸಮಾಜಕ್ಕೆ ಕೊಡಿ ಎಂಬ ಆಗ್ರಹಗಳು ಕುರುಬ ಸಮಾಜದಿಂದ ಕೇಳಿ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಅಳೆದು ತೂಗಿ ಅಜಯಕುಮಾರ್ ಸರನಾಯಕ್ ಇರಲಿ ಎಂದಿದ್ದಾರೆ. ಕುರುಬ ಸಮಾಜ ಕಾಂಗ್ರೆಸ್ ಒಟ್ಟಿಗೆ ಇದೆ. ಜಿಲ್ಲೆಯ ಇಬ್ಬರು ಕುರುಬ ಸಮಾಜದ ಶಾಸಕರು ಪಕ್ಷ ನಿಷ್ಠೆಗೆ ಹೆಸರಾದವರು. ನನ್ನ ವಿರುದ್ಧ ಕೆಲಸ ಮಾಡುತ್ತಾರೆಂಬುದರಲ್ಲಿ ಯಾವುದೇ ಬಗೆಯ ಸತ್ಯಾಂಶ ಇಲ್ಲ.
ಇಲ್ಲಿ ಮೋದಿಯದ್ದಾಗಲೀ ಅಥವಾ ಜಾತಿ ಹವಾ ಏನೂ ಇಲ್ಲ. ನಾನಂತೂ ಎಂದೂ ಜಾತಿ ರಾಜಕಾರಣ ಮಾಡಿಲ್ಲ. ಒಂದೇ ಜಾತಿ ಮತ ಪಡೆದು ಯಾರೂ ಗೆಲ್ಲಲು ಸಾಧ್ಯವಿಲ್ಲ.
- ಅಜಯಕುಮಾರ ಸರನಾಯಕ
---
- ನೀವು ನಾಮಪತ್ರ ಸಲ್ಲಿಸಿದ ದಿನವೇ ವಾಪಸ್ ಪಡೆಯುತ್ತಾರೆ ಅಂತ ಸುದ್ದಿ ಇತ್ತು?
ಜೆಡಿಎಸ್ ಸಂಘಟನೆ ವೀಕ್ ಇದೆ ಅಂತ ಆ ರೀತಿ ಅಪ ಪ್ರಚಾರ ಮಾಡ್ತಾರೆ. ಹಿಂದೆ ಈ ಭಾಗದಲ್ಲಿ ಜನತಾ ಪರಿವಾರದ ಸಂಘಟನೆ ಜೋರಾಗಿತ್ತು. ದೇವೇಗೌಡರು ಮುಖ್ಯಮಂತ್ರಿಯಾದಾಗ ಬಹಳ ಮಂದಿ ಆರಿಸಿದ್ದರು. ಈಗ ಪ್ರಮಾಣ ಕಡಿಮೆ ಇದೆ. ರೊಕ್ಕ ಇರೋ ಮಂದಿ ಪಾರ್ಟಿ ಕಟ್ಟಿಕೊಂಡು ಆಡ್ಡಾಡುತ್ತಾರೆ. ಹಾಗಾಗಿ ಬೇರೆಯವರ ಕಣ್ಣಿಗೆ ನಾವು ವೀಕ್ ಕಾಣ್ತೇವೆ.
- ಬೇರೆ ಪಕ್ಷಗಳಲ್ಲಿ ಟಿಕೆಟ್ಗೆ ಪೈಪೋಟಿ ಇತ್ತು. ನಿಮಗೆ ಸಲೀಸಾಗಿ ಸಿಕ್ಕಿದೆ
ಹಂಗೇನಿಲ್ರಿ, ಮೂರು ಮಂದಿ ಟ್ರೈ ಮಾಡ್ತಿದ್ವಿ. ನಾನು ಜೆಡಿಎಸ್ ಜಿಲ್ಲಾಧ್ಯಕ್ಷ ಆಗಿದ್ದರಿಂದ ದೇವೇಗೌಡರು, ಕುಮಾರಸ್ವಾಮಿಯವರು ನೀನೇ ನಿಲ್ಲು ಎಂದು ಹೇಳಿ ಬಿ. ಫಾರಂ ಕೊಟ್ಟರು.
- ಮತ ಕೇಳಲು ಜನರ ಮುಂದೆ ಹೇಗೆ ಹೋಗ್ತೀರಾ
ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಆಲಮಟ್ಟಿ ಜಲಾಶಯಕ್ಕೆ ಸಾಕಷ್ಟು ಹಣ ಕೊಟ್ಟಿದ್ದಾರೆ. ಬಹಳ ಪ್ರಮಾಣದ ಕಾಮಗಾರಿ ಮಾಡಿಸಿದ್ದಾರೆ. ಪ್ರಧಾನಿಯಾಗಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಕುಮಾರಸ್ವಾಮಿ ಕೂಡ ಒಳ್ಳೆ ಮುಖ್ಯಮಂತ್ರಿಯಾಗಿ ಅನೇಕ ಯೋಜನೆ ಜಾರಿಗೊಳಿಸಿದ್ರು. ಮಕ್ಕಳಿಗೆ ಸೈಕಲ್ ಕೊಟ್ರು. ಇದನ್ನೆಲ್ಲ ಹೇಳಿಕೊಂಡು ಓಟು ಕೇಳ್ತೇವೆ.
- ಪ್ರಚಾರಕ್ಕೆ ದೇವೇಗೌಡ್ರು ಬರ್ತಾರಾ ?
ಕಾಂಗ್ರೆಸ್, ಬಿಜೆಪಿಯ ರಾಷ್ಟ್ರೀಯ ನಾಯಕರು ಬಂದು ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ನೀವೂ ಬರುವಂತೆ ದೇವೇಗೌಡ್ರು ಹಾಗೂ ಕುಮಾರಸ್ವಾಮಿಯವರಲ್ಲಿ ಕೇಳಿದ್ದೇವೆ. ಟೈಮ್ ನೋಡ್ಕಂಡು ಆ ಕಡೆ ಬರ್ತೀವಿ ಅಂತ ಭರವಸೆ ನೀಡಿದ್ದಾರೆ.
- ಗೆಲ್ಲೋವಷ್ಟು ಮತಗಳು ನಿಮಗೆ ಬೀಳ್ತವಾ?
ನಮ್ಮದು ಜಾತ್ಯತೀತ ಜನತಾದಳವಾದ್ದರಿಂದ ಎಲ್ಲ ಜಾತಿಯಲ್ಲಿಯೂ ಕಾರ್ಯಕರ್ತರಿದ್ದಾರೆ. ಮುಸ್ಲಿಮರು ಅಪಾರ ಸಂಖ್ಯೆಯಲ್ಲಿ ಈ ಬಾರಿ ಜೆಡಿಎಸ್ ಬೆಂಬಲಿಸುತ್ತಾರೆ. ಪರಿಶಿಷ್ಟರು ನಮ್ಮ ಕೈ ಹಿಡಿಯಲಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ನಮಗೆ ಎದುರಾಳಿಗಳು. ಶಂಕರ್ ಬಿದರಿ ಸಾಹೇಬ್ರದು ಹೊಸ ಪಾರ್ಟಿ. ಅದು ಇಲ್ಲಿ ನಡೆಯಂಗಿಲ್ಲ.
ನನಗೆ ಪಕ್ಷದ ಟಿಕೆಟ್ ಸಲೀಸಾಗಿ ಸಿಕ್ಕಿಲ್ರಿ. ಮೂರು ಮಂದಿ ಟ್ರೈ ಮಾಡ್ತಿದ್ವಿ. ನಾನು ಜೆಡಿಎಸ್ ಜಿಲ್ಲಾಧ್ಯಕ್ಷ ಆಗಿದ್ದರಿಂದ ದೇವೇಗೌಡರು, ಕುಮಾರಸ್ವಾಮಿಯವರು ನೀನೇ ನಿಲ್ಲು ಎಂದು ಹೇಳಿ ಬಿ ಫಾರಂ ಕೊಟ್ಟರು.
- ರವಿ ಹುಣಶ್ಯಾಳ
ಚಿಕ್ಕಪ್ಪನಹಳ್ಳಿ ಷಣ್ಮುಖ