ಕ್ಷೇತ್ರಗಳು

ಚಿತ್ರದುರ್ಗದ ಕೋಟೆ ಆಳುವವರಾರು?

ಆರಂಭದಿಂದಲೂ ಚಿತ್ರದುರ್ಗ ಯಾವುದೇ ಒಂದು ಪಕ್ಷದ ಭದ್ರಕೋಟೆಯಾಗಿಲ್ಲ. ಆಗಾಗ...

ಚಿತ್ರದುರ್ಗದ ಕೋಟೆ ಆಳುವವರಾರು?
ಆರಂಭದಿಂದಲೂ ಚಿತ್ರದುರ್ಗ ಯಾವುದೇ ಒಂದು ಪಕ್ಷದ ಭದ್ರಕೋಟೆಯಾಗಿಲ್ಲ.  ಆಗಾಗ ಅನ್ಯ ಪಕ್ಷದವರ ಪಾಲಾಗುತ್ತ ಬಂದಿರುವ ಈ ಕ್ಷೇತ್ರದಲ್ಲಿ 1996ರ ನಂತರ ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೆ ಜಯ ಸಾಧಿಸಿಲ್ಲ. ಹಾಗಾಗಿ ಈ ಬಾರಿ ಸಂಸದ ಟೆಕ್ಕಿ ಜನಾರ್ದನಸ್ವಾಮಿ ಅವರಿಗೆ ಸವಾಲಿನ ಚುನಾವಣೆಯಾಗಿದೆ.  ಕಾಂಗ್ರೆಸ್‌ನಿಂದ ಮೂಡಿಗೆರೆಯ ಲಿಡ್ಕರ್ ಚಂದ್ರಪ್ಪ, ಜೆಡಿಎಸ್‌ನ ಗೂಳಿಹಟ್ಟಿ ಶೇಖರ್ ಸ್ಪರ್ಧಿಸಿದ್ದಾರೆ.

-    ಅಮೆರಿಕದಿಂದ ಬಂದು ಸಂಸದರಾಗಿ 5 ವರ್ಷ ಹೇಗನಿಸಿದೆ?
    ಪ್ರತಿಯೊಂದು ತಾಲೂಕು, ಗ್ರಾಮ ಪಂಚಾಯಿತಿ, ಹೋಬಳಿ ಮಟ್ಟಕ್ಕೆ ಭೇಟಿ ನೀಡಿ ಸಾವಿರಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಆದರೂ ದೊಡ್ಡ ಕ್ಷೇತ್ರವಾದ್ದರಿಂದ ಇಷ್ಟು ಮಾಡಿದರೂ ಎಲ್ಲ ಕಡೆ ಹೋಗೋಕಾಗಿಲ್ಲ ಎಂಬ ಕೊರಗು. ಪಾರ್ಲಿಮೆಂಟ್‌ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ ಜೊತೆಗೆ ಪ್ರತಿ ವಾರದಲ್ಲಿ 3 ರಿಂದ 5 ದಿನ ಕ್ಷೇತ್ರದಲ್ಲಿ ತಿರುಗಾಡಿದ್ದೇನೆ. ಅನುದಾನ ಸದ್ವಿನಿಯೋಗ ಮಾಡಿದ್ದೇನೆ. ಜನರ ಸುಖ, ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಹತ್ತಾರು ಸಾವಿರ ಶಿಫಾರಸು ಪತ್ರಗಳನ್ನು ಕೊಟ್ಟಿದ್ದೇನೆ.

-    ನೀವು ಕೈಗೊಂಡ ಅತ್ಯುತ್ತಮ ಕಾರ್ಯ ಯಾವುದು?
    ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಸದರ ಮಾಹಿತಿ ಕೇಂದ್ರ ಪ್ರಾರಂಭ ಮಾಡಿದ್ದು ದೇಶದಲ್ಲೇ ಪ್ರಥಮ. ಈ ಭಾಗದ ಜನರಿಗೆ ಉಪಯೋಗವಾಗಿದೆ. ಉಪಯುಕ್ತತೆಗಿಂತ ಹೆಚ್ಚು ಅರ್ಥ ಆಗಿದೆ. ಮೋದಿ ಸರ್ಕಾರ ಬಂದಾಗ ಈ ರೀತಿಯ ಮಾಹಿತಿ ಕೇಂದ್ರಗಳನ್ನು ರಾಷ್ಟ್ರಾದ್ಯಂತ ಸುಧಾರಿತ ಪ್ರಮಾಣದಲ್ಲಿ ಜಾರಿಗೆ ತರಲು ಪ್ರಯತ್ನಿಸಲಾಗುವುದು.

-    ಸಂಸದರಾಗಿ 5 ವರ್ಷಗಳ ಅವಧಿ ತೃಪ್ತಿ ತಂದಿದೆಯೇ?
    ಅತ್ಯಂತ ಹೆಚ್ಚು ತೃಪ್ತಿ ಇದೆ. ಅತ್ಯಂತ ಉತ್ತಮ, ಶ್ರೇಷ್ಠ, ಸಾರ್ವತ್ರಿಕ ಜಿಲ್ಲೆಯಾಗಿ ಅಭಿವೃದ್ಧಿಗೊಳಿಸಲು ಭದ್ರ ಬುನಾದಿ ಹಾಕಿದ್ದರೂ ಜನಸಾಮಾನ್ಯರಿಗೆ ಅದನ್ನು ತಿಳಿಸಲು ಸಾಧ್ಯವಾಗಿಲ್ಲ. 800 ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಹಾಗೆ ನೋಡಿದರೆ ಪ್ರತಿನಿತ್ಯ ಒಂದು ಶಂಕುಸ್ಥಾಪನೆ ಅಥವಾ ಉದ್ಘಾಟನೆ ಮಾಡಬಹುದಿತ್ತು. ನಾನೇ ಮಾಡಿದೆ ಎಂದು ಹೇಳಿಕೊಳ್ಳುವುದು ಬೇಡ ಎನಿಸಿದ್ದರಿಂದ ಆ ಕೆಲಸ ಮಾಡಲಿಲ್ಲ.

-    ಮೋದಿ ಅಲೆ ಇದೆಯೇ?
    ದೇಶಾದ್ಯಂತ ಮೋದಿ ಅಲೆ ಇದೆ. ಮೋದಿ ಪ್ರಧಾನಿ ಅಭ್ಯರ್ಥಿ ಘೋಷಣೆ ಜನರಲ್ಲಿ ಹೆಚ್ಚು ಉತ್ಸಾಹ ಮೂಡಿಸಿದೆ. ಪಕ್ಷಾತೀತವಾಗಿ ಜನರು ಬೆಂಬಲ ನೀಡುತ್ತಿದ್ದಾರೆ. ಯುಪಿಎ ಸರ್ಕಾರದ ಹತ್ತು ವರ್ಷಗಳ ಆಡಳಿತ ವಿರೋಧಿ ಅಲೆ ತುಂಬಾ ಸ್ಟ್ರಾಂಗ್ ಆಗಿದೆ. ಯುಪಿಎ ದುರಾಡಳಿತದಿಂದ ಬೇಸತ್ತು ಭ್ರಮನಿರಸನಗೊಂಡ ಜನರು ಇವತ್ತು ಒಮ್ಮತದಿಂದ ಬಿಜೆಪಿ ಕಡೆ ಒಲವು ವ್ಯಕ್ತಪಡಿಸುತ್ತಿದ್ದಾರೆ.

 ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೋಗಲಾಡಿಸುವ ನಿಟ್ಟಿನಲ್ಲಿ ನನ್ನ ಅವಧಿಯಲ್ಲಿ ಪ್ರಾರಂಭ ಮಾಡಿದ ಕೆಲಸವನ್ನು ಮುಂದಿನ ಅವಧಿಯಲ್ಲಿ ಪರಿಪೂರ್ಣಗೊಳಿಸುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಚಿತ್ರದುರ್ಗದಲ್ಲೂ ಬಿಜೆಪಿ ಆಯ್ಕೆಯಾದರೆ ಜಿಲ್ಲೆಯ ಅಭಿವೃದ್ಧಿ ಹತ್ತು ಪಟ್ಟು ಹೆಚ್ಚಾಗಲು ಸಾಧ್ಯ.
- ಜನಾರ್ದನಸ್ವಾಮಿ

--
-    ಯಾವ ಆಧಾರದ ಮೇಲೆ ಜನರು ನಿಮಗೆ ಮತ ನೀಡಬೇಕು?
    ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಜವಳಿ ಸಚಿವನಾಗಿದ್ದಾಗ ಗುರುತರವಾದ ಕೆಲಸ ಮಾಡಿದ್ದೇನೆ. ಹೊಸದುರ್ಗ, ಚಿತ್ರದುರ್ಗದಲ್ಲಿ ಸಿಂಥೆಟೆಕ್ ಟ್ರ್ಯಾಕ್, ಈಜು ಕೊಳ, ಚಳ್ಳಕೆರೆ ತಾಲೂಕಿನ ಗೊರ್ಲಕುಂಟೆಯಲ್ಲಿ ಆಧುನಿಕ ಕಂಬಳಿ ತಯಾರಿಸುವ ಯಂತ್ರ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನನ್ನ ಗೆಲುವಿನ ಹಾದಿ ಸುಗಮ ಮಾಡಲಿದೆ. ಅಲ್ಲದೆ, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತ ವೈಖರಿ ಜನರ ಮನಸ್ಸಿನಲ್ಲಿ ಸದಾ ಹಸಿರಾಗಿವೆ. ಇದು ನನ್ನ ಪರವಾಗಿ ಕೆಲಸ ಮಾಡುತ್ತವೆ.
-    ವಿಧಾನಸಭೆ ಕಲಾಪ ನಡೆದಾಗ ನಿಮ್ಮ ವರ್ತನೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ.
    ನಾನು ಯಾವುದೇ ರೀತಿಯಲ್ಲಿ ಅನುಚಿತವಾಗಿ ವರ್ತಿಸಿಲ್ಲ. ಮಾರ್ಷಲ್‌ಗಳು ನನ್ನನ್ನು ಎಳೆದಾಡಿ ನನ್ನ ಅಂಗಿ ಹರಿದಿದ್ದರು. ನನ್ನದೇನೂ ತಪ್ಪಿಲ್ಲ. ಭಾವುಕನಾಗಿ ನನ್ನ ಹಕ್ಕು ಪ್ರತಿಪಾದಿಸಿದೆ ಅಷ್ಟೆ.
-    ಹಾಲಿ ಸಂಸದ ಜನಾರ್ದನಸ್ವಾಮಿ ಅವರಿಗೆ ಮೋದಿ ಅಲೆ ಬೆಂಬಲಕ್ಕಿದೆಯಲ್ಲವೇ?
    ಸಂಸದ ಜನಾರ್ದನಸ್ವಾಮಿ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಬಿಜೆಪಿ, ಮೋದಿ ಅಲೆ ಕ್ಷೇತ್ರದಲ್ಲಿ ಎಲ್ಲೂ ಇಲ್ಲ. ಅವರು ಅಮೆರಿಕದಿಂದ ಬಂದವರು. ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ತರೀಕೆರೆ ತಾಲೂಕು ಲಕ್ಕವಳ್ಳಿ ಗ್ರಾಮದವರು. ನಾನು ಲೋಕಲ್. ಇದರಿಂದ ಮತದಾರರ ಒಲವು ನನಗೆ ಹೆಚ್ಚಾಗಿ ಸಿಗಲಿದೆ.
-    ಗೆಲುವಿನ ಲೆಕ್ಕಾಚಾರಕ್ಕೆ ಆಧಾರವೇನು?
    ಶಾಸಕ, ಮಾಜಿ ಶಾಸಕ, ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆ ಸೇರಿದಂತೆ ದೊಡ್ಡ ಪಡೆ ಇದೆ. ಮುಖ್ಯವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪ ಅವರ ಆಶೀರ್ವಾದದಿಂದ ಶೇ.90ರಷ್ಟು ಅನುಕೂಲ ಆಗಲಿದೆ. ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯದ ಜೊತೆಗೆ ಚಿಕ್ಕಮಗಳೂರು, ಶೃಂಗೇರಿ ಬಳಿ ಅದರಲ್ಲೂ ನಕ್ಸಲ್‌ಪೀಡಿತ ಪ್ರದೇಶದಲ್ಲಿ ಕೈಮಗ್ಗಗಳ ಬಗ್ಗೆ ತರಬೇತಿ ನೀಡಿ ಮೂಲ ಸೌಲಭ್ಯ ಒದಗಿಸಿದ್ದು ಮತ್ತೊಂದು ಉತ್ತಮ ಕಾರ್ಯ. ಇವೆಲ್ಲ ನನಗೆ ಅನುಕೂಲಕರವಾಗಲಿವೆ.


ಜನಾರ್ದನಸ್ವಾಮಿ ಅಮೆರಿಕದಿಂದ ಬಂದವರು. ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ತರೀಕೆರೆ ತಾಲೂಕು ಲಕ್ಕವಳ್ಳಿ ಗ್ರಾಮದವರು. ನಾನು ಲೋಕಲ್. ಇದರಿಂದ ಮತದಾರರ ಒಲವು ನನಗೆ ಹೆಚ್ಚಾಗಿ ಸಿಗಲಿದೆ.
- ಗೂಳಿಹಟ್ಟಿ ಶೇಖರ್

----------
-    ಸ್ಥಳೀಯ ಪರಕೀಯ ಎಂಬ ಭಾವನೆ ನಿಮಗೆ ಮುಳುವಾಗುವುದೇ?

    ಮೂಲತಃ ಮೂಡಿಗೆರೆಯವನಾದರೂ ನಾನು ದುರ್ಗದ ಅಳಿಯ. ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಪರಕೀಯ ಎಂಬ ಭಾವನೆಯೇ ಕಾಲ್ಪನಿಕ. ನಮ್ಮ ಪೂರ್ವಿಕರು ಎಲ್ಲಿಂದ ವಲಸೆ ಬಂದರು, ಎಲ್ಲಿಗೆ ಹೋದರು ಎಂಬುದನ್ನು ಯಾರೂ ಗುರುತಿಸಲಿಕ್ಕೆ ಸಾಧ್ಯವಿಲ್ಲ. ರಾಷ್ಟ್ರೀಯ ಮುಖಂಡರು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದಾದರೆ ಪಕ್ಕದ ಜಿಲ್ಲೆಯವನಾಗಿ ನನಗೆ ಸ್ಪರ್ಧಿಸಲು ಯಾವುದೇ ಅಭ್ಯಂತರವಿಲ್ಲ ಎಂಬುದೇ ನನ್ನ ಭಾವನೆ.
-    ಕಾಂಗ್ರೆಸ್ ಪಕ್ಷಕ್ಕೆ ಜನರು ಯಾಕೆ ಮತ ಹಾಕಬೇಕು?
    ಕಳೆದ 25 ವರ್ಷಗಳಿಂದ ಸಾರ್ವಜನಿಕ ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಸೇವೆ ಮಾಡಿದ್ದೇನೆ. ಗ್ರಾಮೀಣ ಸೊಗಡಿನ ಅನುಭವದಿಂದ ಸಮರ್ಥವಾಗಿ ಕೆಲಸ ಮಾಡುತ್ತೇನೆ. ಯುಪಿಎ ಪ್ರಧಾನಿ ಡಾ. ಮನಮೋಹನಸಿಂಗ್ ಅವರ ಹೊಸ ಆರ್ಥಿಕ ನೀತಿಯಿಂದಾಗಿ ದೇಶದಲ್ಲಿ ಸಮೃದ್ಧತೆ ಇದೆ. ಕಾಂಗ್ರೆಸ್‌ನಿಂದ ದೇಶ ಅಪಾರ ಅಭಿವೃದ್ಧಿ ಕಂಡಿದೆ.
-    ನಿಮ್ಮ ಗೆಲುವಿನ ಲೆಕ್ಕಾಚಾರವೇನು?
    ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮರ್ಥ ಸರ್ಕಾರ ಅಧಿಕಾರದಲ್ಲಿದೆ. ಬಹಳ ಮುಖ್ಯವಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ. ಈ ಕ್ಷೇತ್ರಕ್ಕೆ ಸೇರಿರುವ ತುಮಕೂರು ಜಿಲ್ಲೆಯ ಶಿರಾದಲ್ಲಿ ಸಚಿವ ಜಯಚಂದ್ರ ಇದ್ದಾರೆ.  ಮತ್ತಿತರ ಮುಖಂಡರು ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ನನ್ನ ಜೊತೆಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇದರಿಂದ ನನ್ನ ಗೆಲುವು ಸುಲಭ.
-    ಬಿಜೆಪಿಯ ಹಾಲಿ ಸಂಸದರಿದ್ದಾರೆ. ಮೋದಿ ಅಲೆ ಬಗ್ಗೆ ಏನಂತೀರಿ?
    ಕಳೆದ ಬಾರಿ ಕಾಂಗ್ರೆಸ್‌ನಿಂದ ಸಮರ್ಥ ಹೋರಾಟ ಸಾಧ್ಯವಾಗಲಿಲ್ಲ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಆಗ ತಾನೇ ಅಮೆರಿಕದಿಂದ ಬಂದು ಚುನಾವಣೆ ಕಣಕ್ಕಿಳಿದಿದ್ದರು. ಜನರು ಕುತೂಹಲಕ್ಕಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರು. ಆದರೆ, 5 ವರ್ಷ ಅವರ ಕಾರ್ಯವೈಖರಿ ನೋಡಿರುವ ಜನರು ಭ್ರಮನಿರಸನಗೊಂಡಿದ್ದಾರೆ. ತಮಗೆ ದೊರಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ನಾನು ಎಲ್ಲ ತಾಲೂಕುಗಳಲ್ಲೂ ಪ್ರವಾಸ ಮಾಡಿ ಪ್ರಚಾರ ಕೈಗೊಂಡಿದ್ದೇನೆ. ಯಾವ ಮೂಲೆಯಲ್ಲೂ ನರೇಂದ್ರ ಮೋದಿ ಅಲೆ ಎಂಬುದು ಕಂಡುಬಂದಿಲ್ಲ.

ಜಿಲ್ಲೆಯ ಸಮಗ್ರ ಅಭಿವೃದ್ಧಿ ನನ್ನ ಆದ್ಯತೆ. ಜಿಲ್ಲೆಯ ಜನತೆಯ ಆಶಾಕಿರಣ ಎನಿಸಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಕೇಂದ್ರದ ಸಂಪೂರ್ಣ ನೆರವಿನೊಂದಿಗೆ ಆದಷ್ಟು ಶೀಘ್ರ ಪೂರ್ಣಗೊಳಿಸುವುದು.
- ಎನ್. ಚಂದ್ರಪ್ಪ


- ಕ.ಮ. ರವಿಶಂಕರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ನೂತನ ರಾಜ್ಯಪಾಲರಾಗಿ ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ

ಸರ್ಕಾರದಿಂದ ಉತ್ತರ ಕೇಳುವುದು ಅರಾಜಕತೆಯಲ್ಲ: ಜೈಲಿಗೂ ಹೋಗಲು ಸಿದ್ಧ; CJP ತಿರಂಗಾ ಮೆರವಣಿಗೆಗೂ ಮುನ್ನ ಅಭಿಜೀತ್ ದೀಪ್ಕೆ!

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು