ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಿಜೆಪಿ ಜೊತೆಯಾಗಿ ಕಾಂಗ್ರೆಸ್ ಅನ್ನು ಎದುರಿಸಲು ಸಜ್ಜಾಗಿವೆ. ಮಹಾರಾಷ್ಟ್ರ ನವನಿರ್ಮಾಣ ಸೇನೆ ಸಹ ಬಿಜೆಪಿ-ಶಿವಸೇನೆ ಮೈತ್ರಿಯ ವಿರೋಧಿ ಪಾಳಯವೇ, ಆದರೆ, ಎಂಎನ್‌ಎಸ್ ಮುಖ್ಯಸ್ಥ ರಾಜ್‌ಠಾಕ್ರೆಯೂ ಕೂಡ ಎನ್‌ಡಿಎದೊಂದಿಗೆ ಕೈಜೋಡಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಟೈಮ್ಸ್ ನೌ ವಾಹಿನಿಗೆ ಮತ್ತು ಹಿಂದುಸ್ತಾನ್ ಟೈಮ್ಸ್ ಪತ್ರಿಕೆಗೆ ಇತ್ತೀಚೆಗೆ ಸಂದರ್ಶನ ನೀಡಿರುವ ಅವರು, ತಮ್ಮ ಬೆಂಬಲವೇನಿದ್ದರೂ ಮೋದಿಯವರಿಗಷ್ಟೇ ಹೊರತು, ಬಿಜೆಪಿ ಮತ್ತು ಎನ್‌ಡಿಎಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-ನರೇಂದ್ರ ಮೋದಿಗೆ ನಿಮ್ಮ ಬೆಂಬಲ ಅನಿವಾರ್ಯತೆಯಿಂದ ಬಂದದ್ದೋ ಅಥವಾ ಆಯ್ಕೆಯೋ?
ನನ್ನನ್ನು ಅನಿವಾರ್ಯತೆಗೆ ತಳ್ಳುವುದಕ್ಕೆ ಯಾರಿಗೆ ಸಾಧ್ಯ? ಈಗಲ್ಲ, 2011ರಲ್ಲಿ ಗುಜರಾತ್‌ಗೆ ಭೇಟಿ ಕೊಟ್ಟಾಗಲೇ ನಾನು 'ನರೇಂದ್ರ ಮೋದಿ ಪ್ರಧಾನಿಯಾಗಲು ಅರ್ಹರು' ಅಂತ ಹೇಳಿದ್ದೆ. ಆಗಿನ್ನು ಈ ರಾಜ್‌ನಾಥ್ ಸಿಂಗ್, "ರಾಜ್ ಠಾಕ್ರೆ ಪಕ್ಷದ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾನೆ" ಎಂದು ಹೇಳಿರಲಿಲ್ಲ. ನಿಜ ಹೇಳಬೇಕೆಂದರೆ ಮೋದಿಯವರನ್ನು ಬೆಂಬಲಿಸಲು ಶಿವಸೇನೆ ಸಿದ್ಧವೇ ಇರಲಿಲ್ಲ. ಅದು ಮತ್ತು ಬಿಜೆಪಿ ಎಲ್.ಕೆ. ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದವು. ಈಗ ಏಕಾಏಕಿ ತಮ್ಮ ನಿಲುವು ಬದಲಿಸಿ ಮೋದಿ ನಾಮ ಜಪಿಸುತ್ತಿವೆ.
-ಒಂದು ವೇಳೆ ಎನ್‌ಡಿಎ ಅಧಿಕಾರಕ್ಕೆ ಬಂದು, ಮಿತ್ರ ಪಕ್ಷಗಳೆಲ್ಲ ಮೋದಿ ಬದಲು ಬೇರೆಯವರನ್ನು ಪ್ರಧಾನಿ ಮಾಡಬೇಕೆಂದು ಪಟ್ಟು ಹಿಡಿದರೆ, ಆಗಲೂ ನೀವು ಎನ್‌ಡಿಎ ಅನ್ನು ಬೆಂಬಲಿಸುತ್ತೀರಾ?
ಮೋದಿಯಷ್ಟು ಅರ್ಹರು ಮತ್ತೊಬ್ಬರಿದ್ದಾರೆ ಎಂದು ನನಗನಿಸುವುದಿಲ್ಲ. ನಾನವರನ್ನು ಬೆಂಬಲಿಸುತ್ತಿರುವುದು ಅವರ ಕೆಲಸವನ್ನು ನೋಡಿಯೇ. ಹಿಂದೆಯೇ ಎಲ್ಲವನ್ನೂ ಸ್ಪಷ್ಟಪಡಿಸಿದ್ದೇನೆ, ನನಗೆ ಎನ್‌ಡಿಎ ಸೇರಬೇಕೆಂಬ ಉದ್ದೇಶವಿಲ್ಲ. ದೇಶಕ್ಕೆ ಸುಭದ್ರ ನಾಯಕತ್ವ ಬರಲಿ ಅನ್ನುವುದಷ್ಟೇ ನನ್ನ ಆಸೆ. ಎನ್‌ಡಿಎ ಅಥವಾ ಬಿಜೆಪಿಗೆ ನನ್ನ ಬೆಂಬಲವಿಲ್ಲ.
-ಮೋದಿ ಗುಜರಾತ್ ಮಾದರಿಯ ಬಗ್ಗೆ ಮಾತನಾಡಿದರೆ, ನೀವು ಮಹಾರಾಷ್ಟ್ರವೇ ಹೆಚ್ಚು ಅಭಿವೃದ್ಧಿಯಾಗಿದೆ ಎನ್ನುತ್ತೀರಿ.
ಮಹಾರಾಷ್ಟ್ರದ ಅಭಿವೃದ್ಧಿಗೆ ದಶಕಗಳಿಂದ ಸಾಗಿಬಂದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು, ಚಳವಳಿಗಳು..ಹೀಗೆ ಅನೇಕ ಕಾರಣಗಳಿವೆ. ಇನ್ನು ಆಡಳಿತದ ವಿಷಯಕ್ಕೆ ಬಂದರೆ, ಮುಂಚೂಣಿಯಲ್ಲಿರುವುದು ಗುಜರಾತೇ. ಮೋದಿ ಇಡೀ ಗುಜರಾತ್‌ಗೆ ಕೊಡುಗೆ ಕೊಟ್ಟಿದ್ದಾರೆ, ನಮ್ಮ ಈ ಶರದ್‌ಪವಾರ್, ವಿಲಾಸ್‌ರಾವ್ ದೇಶಮುಖ್ ಅಥವಾ ಅಶೋಕ್ ಚವ್ಹಾಣರಂತೆ ಕೇವಲ ತಮ್ಮ ತಮ್ಮ ಕ್ಷೇತ್ರಗಳಿಗಷ್ಟೇ ಅಲ್ಲ. ನಮ್ಮ ರಾಜ್ಯದಲ್ಲಿ ಮೋದಿಯಂಥ ನಾಯಕರ ಕೊರತೆಯಿದೆ.
-ನಿಮ್ಮ ಮಣ್ಣಿನ ಮಕ್ಕಳು ಎಂಬ ವಿವಾದ (ಮುಂಬೈಗೆ ಬರುವ ಉತ್ತರ ಭಾರತೀಯರ ವಿರೋಧ), ಮೋದಿಯವರಿಗೆ ಉತ್ತರಭಾರತದಲ್ಲಿ ತೊಂದರೆ ತಂದೊಡ್ಡಬಹುದಲ್ಲವೇ?
ತಮಗೆ ಬೆಂಬಲ ಕೊಡಬೇಕೆಂದು ಮೋದಿ ನನ್ನನ್ನು ಕೇಳಲಿಲ್ಲ. ನಾನೂ ಕೂಡ "ನಿಮ್ಮನ್ನು ಬೆಂಬಲಿಸುತ್ತೇನೆ, ನಮ್ಮ ಸಂಸದರಿಗೆ ಸಚಿವಾಲಯಗಳನ್ನು ಕೊಡಿ" ಎಂದೇನೂ ಅವರಿಗೆ ಕೇಳಿಲ್ಲ. ಹಾಗಾಗಿ, ನನ್ನ ನಿಲುವು ಅವರಿಗೇಕೆ ಮುಜುಗರ ತರಬೇಕು? ಒಂದು ವೇಳೆ ಅವರನ್ನು ಬೆಂಬಲಿಸದೇ ಇದ್ದಿದ್ದರೆ, ರಾಜ್ ಠಾಕ್ರೆ ಕಾಂಗ್ರೆಸ್‌ನ ಕೈಗೊಂಬೆ ಎಂದು ಎಲ್ಲರೂ ದೂಷಿಸುತ್ತಿದ್ದರಲ್ಲವೇ?
-ನಿತಿನ್ ಗಡ್ಕರಿ ಮತ್ತು ಗೋಪಿನಾಥ್ ಮುಂಡೆ ಅವರು ನಿಮ್ಮನ್ನು ಭೇಟಿ ಮಾಡಿದ ನಂತರ, ಎನ್‌ಡಿಎ ಸೇರುವ ಯೋಚನೆ ನಿಮಗೆ ಬಂದಿತ್ತಾ? ಅಥವಾ 2009ರಲ್ಲಿ ನೀವು ಅವರ ವೋಟ್ ಬ್ಯಾಂಕ್ ವಿಭಜಿಸಿದ ಕಾರಣಕ್ಕೆ, ಈಗ ಸ್ನೇಹ ಹಸ್ತ ಚಾಚುವುದಕ್ಕೆ ಮುಂಡೆ-ಗಡ್ಕರಿ ಮುಂದಾದರಾ?
1999ರಲ್ಲಿ ಅಧಿಕಾರ ಕಳೆದುಕೊಂಡಂದಿನಿಂದ ಇಂದಿನವರೆಗೂ ಮತ್ತೆ ಅಧಿಕಾರಕ್ಕೇರಲು ಬಿಜೆಪಿಗೆ ಸಾಧ್ಯವಾಗಿಲ್ಲ. ನನ್ನ ಪಕ್ಷ ಅಸ್ತಿತ್ವಕ್ಕೆ ಬಂದದ್ದು 2006ರಲ್ಲಿ, ಆದರೆ ಅದಕ್ಕೂ ಹಿಂದಿನಿಂದಲೇ ಬಿಜೆಪಿಯ ವೋಟ್‌ಬ್ಯಾಂಕ್ ಸೋರತೊಡಗಿತ್ತು.
-ನೀವು ಬಿಜೆಪಿ ಮತ್ತು ಶಿವಸೇನೆಯೊಂದಿಗೆ ಕೈಜೋಡಿಸಲು ಒಪ್ಪಿಕೊಂಡಿದ್ದೀರಿ ಎಂದು ಗಡ್ಕರಿ ಸಂದರ್ಶನವೊಂದರಲ್ಲಿ ಹೇಳಿದ್ದರಲ್ಲ?
ಗಡ್ಕರಿ ಮತ್ತು ಮುಂಡೆ ಅಂಥ ಒಂದು ಮೈತ್ರಿ ಮಾಡಿಕೊಳ್ಳಲು ನನ್ನನ್ನು ಭೇಟಿ ಮಾಡಿದ್ದರು. ಆದರೆ ಇವರಿಬ್ಬರೂ ಪ್ರಬಲ ಪ್ರಸ್ತಾವನೆಯನ್ನು ಮುಂದಿಡಲಿಲ್ಲ.
-ಹಾಗಿದ್ದರೆ ಅಂಥ ಮೈತ್ರಿಗೆ ನೀವು ಸಿದ್ಧ ಎಂದಂತಾಯಿತು?
ಆ ಮೈತ್ರಿ ಎಂದಿಗೂ ಸಾಧ್ಯವಿರಲಿಲ್ಲ ಬಿಡಿ. ನಿಜಕ್ಕೂ ಸ್ನೇಹ ಹಸ್ತ ಚಾಚದೆಯೇ, ತಾವು ಸ್ನೇಹ ಹಸ್ತ ಚಾಚುತ್ತಿದ್ದೇವೆ ಎಂದು ತೋರಿಸಿಕೊಳ್ಳುವುದಕ್ಕಷ್ಟೇ ಅವರು ಆ ರೀತಿ ಮಾಡಿದ್ದು.
-ಶಿವಸೇನೆ ಮತ್ತು ಬಿಜೆಪಿ ಮಹಾರಾಷ್ಟ್ರದಲ್ಲಿ ದುರ್ಬಲ ಮೈತ್ರಿಕೂಟಗಳಾಗಲಿವೆ ಎಂದು ಭಾವಿಸುತ್ತೀರಾ?
ಇವೂ ಕೂಡ ಆಡಳಿತಾರೂಢ ಕಾಂಗ್ರೆಸ್-ಎನ್‌ಸಿಪಿ ಪಕ್ಷಗಳ ಹಾದಿಯಲ್ಲೇ ಸಾಗುತ್ತಿವೆ.
-ಒಂದು ವೇಳೆ ರಾಜ್‌ನಾಥ್ ಸಿಂಗ್ ಅವರು ಬಿಜೆಪಿಗೆ ಎಮ್‌ಎನ್‌ಎಸ್‌ನಿಂದ 'ಬಯಸದ ಬೆಂಬಲ' ಬೇಕಿಲ್ಲ ಎಂದು ಇನ್ನೊಮ್ಮೆ ಹೇಳಿದರೆ?
ಅವರು ಏನು ಬೇಕಾದರೂ ಮಾತನಾಡಲಿ, ಅವರ ಮಾತಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನಾನು ಬೆಂಬಲ ಕೊಡುತ್ತಿರುವುದು ಮೋದಿಯವರಿಗೇ ಹೊರತು ರಾಜ್‌ನಾಥ್ ಸಿಂಗ್‌ಗಲ್ಲ.
-ಎಮ್‌ಎನ್‌ಎಸ್ ಅಭಿವೃದ್ಧಿಯ ವಿಷಯಗಳ ಬದಲಾಗಿ ಬರೀ ವಿವಾದದಿಂದಲೇ ಗುರುತಿಸಿಕೊಳ್ಳುತ್ತಿರುವುದು ಖೇದಕರವಲ್ಲವೇ?
ನಾನು ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಯಾವ ಹಾದಿ ಸರಿಯೆಂದು ಭಾವಿಸುತ್ತೇನೋ, ಅದು ಅತ್ತ ಸಾಗಬೇಕು. ಬೇರೆಯವರಿಗೇನು ಬೇಕೋ ಅದನ್ನು ನಾನು ಕೊಡುವುದಿಲ್ಲ. ಒಂದು ವೇಳೆ ಯಾವುದಾದರೂ ಸಮಸ್ಯೆಗೆ ಆಕ್ರಮಣಕಾರಿ ಸಂದೇಶದಿಂದಲೇ ಪರಿಹಾರ ದೊರಕಿಸಿಕೊಡುವುದೇ ಕೊನೆಯ ಆಯ್ಕೆಯಾದರೆ, ಅದನ್ನು ಮಾಡಲು ನಾನು ಹಿಂಜರಿಯುವುದಿಲ್ಲ.
-ದುರ್ದೈವವೆಂದರೆ ಚುನಾವಣೆಗಳು ಆರ್ಥಿಕತೆ ಅಥವಾ ಅಭಿವೃದ್ಧಿಯ ಅಜೆಂಡಾಗಳ ಮೇಲೆ ನಡೆಯುತ್ತಿಲ್ಲ ಅಲ್ಲವೇ?
ಅದು ನಿಜ. ಜನರಿಗೆ ಭವಿಷ್ಯದ ಬಗ್ಗೆ ಮತ್ತು ತಾವೇನು ಮಾಡಬೇಕು ಎನ್ನುವುದರ ಬಗ್ಗೆ ಗೊಂದಲವಿದೆ. ಆದರೆ ತಮಗೇನೂ ಬೇಡ ಎನ್ನುವುದಂತೂ ಈಗ ಅರ್ಥಮಾಡಿಕೊಂಡಿದ್ದಾರೆ. ಅವರು ಕಾಂಗ್ರೆಸ್‌ನಿಂದ ಬೇಸತ್ತಿದ್ದಾರೆ, ಬದಲಾವಣೆ ಬೇಡುತ್ತಿದ್ದಾರೆ. ಚುನಾವಣೆಯಲ್ಲಿ ವಿರೋಧ ಪಕ್ಷ ಗೆಲ್ಲುವುದಿಲ್ಲ, ಆಡಳಿತ ಪಕ್ಷ ಸೋಲುತ್ತದಷ್ಟೆ!
-ಮೋದಿ ಅಧಿಕಾರಕ್ಕೆ ಬಂದರೂ ಪರಿಸ್ಥಿತಿ ಇದೇ ರೀತಿ ಇರಬಹುದಲ್ಲವೇ?
ಇರಬಹುದೇನೋ? ಆದರೆ ನಮ್ಮ ಮುಂದೆ ಇಂದು ಬೇರಿನ್ಯಾವ ಆಯ್ಕೆಗಳಿವೆ? ಅಲ್ಲೊಬ್ಬ ವ್ಯಕ್ತಿ(ಮೋದಿ) ತನ್ನ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಆ ಕಾರಣಕ್ಕಾಗಿಯೇ ಅವರನ್ನು ಬೆಂಬಲಿಸುತ್ತಿದ್ದೇವೆ.
-ಅಂದರೆ ನಿಮಗೆ ಮೋದಿಯವರ ಮೇಲೆ ನಂಬಿಕೆಯಿದೆಆದರೆ ಬಿಜೆಪಿಯ ಮೇಲಲ್ಲ?
ಈ ಚುನಾವಣೆಯಲ್ಲಿ ಬಿಜೆಪಿ ತನ್ನನ್ನೇ ತಾನು ನಂಬುತ್ತಿಲ್ಲ ಎನ್ನುವುದು ನೋಡಿದರೇ ತಿಳಿಯುತ್ತಿಲ್ಲವೇ? ಈ ಕಾರಣಕ್ಕಾಗೇ ಅದು ಮೋದಿಯ ಸುತ್ತ ಪ್ರದಕ್ಷಿಣೆ ಹಾಕುತ್ತಿದೆ. ಬಿಜೆಪಿಯವರು ಪಕ್ಷದ್ದಲ್ಲ, ಮೋದಿಯವರ ಇಮೇಜನ್ನು ಜನರ ಮುಂದಿಡುತ್ತಿದ್ದಾರೆ.
-ಉದ್ಧವ್ ಠಾಕ್ರೆಯನ್ನು ಸೋಲಿಸುವುದು ನಿಮ್ಮ ಮುಖ್ಯ ಉದ್ದೇಶ ಎನ್ನಲಾಗುತ್ತಿದೆ?
ನನ್ನ ಗುರಿಯೇನಿದ್ದರೂ ಕಾಂಗ್ರೆಸ್ ಅನ್ನು ಸೋಲಿಸುವುದು ಮತ್ತು ಮೋದಿಯವರನ್ನು ಪ್ರಧಾನಿ ಮಾಡುವುದಷ್ಟೇ.
-ನೀವು ಮತ್ತು ಉದ್ಧವ್ ಠಾಕ್ರೆ ಒಂದಾಗಬೇಕು ಎಂದು ಮುಂಡೆ ಹೇಳುತ್ತಿದ್ದಾರೆ...
ಅದನ್ನೆಲ್ಲ ಹೇಳುವುದಕ್ಕೆ ಈ ಮುಂಡೆ ಯಾರ್ರೀ? ಒಂದು ವೇಳೆ ನಾವಿಬ್ಬರೂ ಕೈಜೋಡಿಸುವುದೇ ಆದರೆ ನಮಗೆ ಯಾವ ಮಧ್ಯವರ್ತಿಯೂ ಬೇಕಿಲ್ಲ. ಅದೇಕೆ ಎಲ್ಲರಿಗೂ ನಮ್ಮ ಕುಟುಂಬದ ವಿಷಯದಲ್ಲಿ ಮೂಗು ತೂರಿಸಲು ಅಷ್ಟು ಆಸಕ್ತಿ?
-ಎಮ್‌ಎನ್‌ಎಸ್ ಮತ್ತು ಶಿವಸೇನೆಯ ಕುರಿತ ರಾಜಕೀಯ ಮಾತುಗಳು ಬಾಳ ಠಾಕ್ರೆ ಮತ್ತು ಕುಟುಂಬದ ಸಂಬಂಧಗಳ ಸುತ್ತಲೇ ಗಿರಕಿ ಹೊಡೆಯುವುದು ದುರ್ದೈವವಲ್ಲವೇ?
ಇದೆಲ್ಲ ಅನವಶ್ಯಕವಾಗಿತ್ತು. ನಾನು ಈ ಜಗಳವನ್ನು ಶುರು ಮಾಡಲಿಲ್ಲ. ಎಷ್ಟೇ ಮೌನವಹಿಸಿದರೂ ಸಹ ಪದೇ ಪದೆನನ್ನನ್ನು ಟೀಕಿಸಿ, ಪ್ರತಿಕ್ರಿಯೆ ನೀಡುವಂತೆ ಅವರು ಮಾಡಿಬಿಟ್ಟರು. ಒಬ್ಬ ವ್ಯಕ್ತಿ(ಉದ್ಧವ್) ಇಷ್ಟೊಂದು ಚಂಚಲವಾಗಿರುವುದು ಸರಿಯಲ್ಲ. ಒಮ್ಮೆ ಮುಂದೆ ಬಂದು ಸ್ನೇಹ ಹಸ್ತ ಚಾಚಿ, ಮರುಗಳಿಗೆಯಲ್ಲೇ ನನ್ನನ್ನು 'ಬೆನ್ನಿಗೆ ಚೂರಿ ಹಾಕುವವ' ಎಂದುಬಿಡುತ್ತಾನೆ! ಉದ್ಧವ್‌ಗೆ ರಾಜಕಾರಣಿಯಾಗುವ ಯೋಗ್ಯತೆಯಿಲ್ಲ. ರಾಜಕಾರಣಿಯಾಗುವುದಕ್ಕೆ ಆತ ಅನರ್ಹ.
-ಈ ಬಾರಿ ಮತ್ತೆ ವಲಸಿಗರ ವಿಷಯವನ್ನು ಎತ್ತಿಕೊಳ್ಳಲಿದ್ದೀರಾ?
ಪ್ರಪಂಚದ ಎಲ್ಲಾ ದೊಡ್ಡ ನಗರಗಳಲ್ಲೂ ಈ ಸಮಸ್ಯೆ ಇದ್ದೇ ಇದೆ. ಭಾರತದಲ್ಲೇ ನೋಡಿ, ಉತ್ತರಪ್ರದೇಶದಿಂದ ಅನೇಕ ಪ್ರಧಾನಿಗಳು ಬಂದುಹೋಗಿದ್ದಾರೆ. ಆದರೂ ಅಲ್ಲಿನ ಜನರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ಹೋಗುವುದೇಕೆ? ಈ ಹೊರಗಿನವರ ಭಾರವನ್ನು ಮಹಾರಾಷ್ಟ್ರ ಏಕೆ ಹೊರಬೇಕು? ನಮ್ಮ ಮೂಲಸೌಕರ್ಯಗಳ ಮೇಲೆ ಒತ್ತಡ ಬೀಳಲು ಬಿಡಬೇಕೇ?