ಇಂದಿರಾಗಾಂಧಿ ಆಗಿರಲಿ ಅಥವಾ ರಾಜೀವ್ಗಾಂಧಿ ಆಗಿರಲಿ ರಾಷ್ಟ್ರೀಯ ಮಟ್ಟದಲ್ಲಿ ವೈಫಲ್ಯ ಕಂಡು, ದೇಶಾದ್ಯಂತ ಹಿನ್ನಡೆ ಕಂಡರೂ ಕರ್ನಾಟಕ ಮಾತ್ರ ಅವರ ಕೈಬಿಡಲಿಲ್ಲ. ಅದಕ್ಕೇ, ಒಂಬತ್ತನೇ ಚುನಾವಣೆಯಲ್ಲಿ ದೇಶಾದ್ಯಂತ ಹಿನ್ನಡೆ ಸಾಧಿಸಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ಗೆ ರಾಜ್ಯದಲ್ಲಿ ಪ್ರಥಮ ಪ್ರಾಶಸ್ತ್ಯ. 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ 27 ಕ್ಷೇತ್ರಗಳನ್ನು ಮತ್ತೆ ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಸಫಲವಾಯಿತು. ಆಂಧ್ರ ಪ್ರದೇಶ (39), ಮಹಾರಾಷ್ಟ್ರ (28) ನಂತರ ರಾಜ್ಯವೇ ಅತಿಹೆಚ್ಚು ಸೀಟುಗಳನ್ನು ನೀಡಿತು. ತಮಿಳುನಾಡು ಕೂಡ 27 ಸ್ಥಾನಗಳನ್ನು ಕಾಂಗ್ರೆಸ್ಗೆ ಈ ಚುನಾವಣೆಯಲ್ಲಿ ನೀಡಿತು. ಅಷ್ಟೇ ಅಲ್ಲ, ಈ ಚುನಾವಣೆಯಲ್ಲಿ ಕರ್ನಾಟಕದಲ್ಲಿ ದಾಖಲೆಯ ಮತದಾನವೂ ಆಯಿತು.
1989ರಲ್ಲಿ ನಡೆದ ಒಂಬತ್ತನೇ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಷೇತ್ರಗಳಿದ್ದು, ಅದರಲ್ಲಿ ನಾಲ್ಕು ಕ್ಷೇತ್ರಗಳು ಎಸ್ಸಿಗೆ ಮೀಸಲಾಗಿದ್ದವು. 1,46,42,987 ಪುರುಷರು ಹಾಗೂ 1,39,68,457 ಮಹಿಳೆಯರು ಸೇರಿದಂತೆ ಒಟ್ಟಾರೆ 2,86,11,444 ಮತದಾರರಿದ್ದರು. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಬಿಟ್ಟರೆ ರಾಜ್ಯದಲ್ಲಿ ಅತಿ ಹೆಚ್ಚು ಮತದಾರರಿದ್ದರು. 1,93,20,008 ಮತದಾರರು ಹಕ್ಕು ಚಲಾಯಿಸಿ, ಪ್ರಥಮ ಬಾರಿಗೆ ಶೇ.67.53ರಷ್ಟು ಮತ ದಾಖಲಿಸಿದ್ದರು. ಆದರೆ ಈವರೆಗಿನ ಅತಿಹೆಚ್ಚು ಅಂದರೆ, ಶೇ.4.64ರಷ್ಟು ಮತಗಳು ಕುಲಗೆಟ್ಟಿದ್ದವು. 36,361 ಮತಗಟ್ಟೆಗಳಿದ್ದವು. ರಾಷ್ಟ್ರೀಯ ಪಕ್ಷಗಳಿಂದ 91, ರಾಜ್ಯ ಪಕ್ಷಗಳಿಂದ 4, ಮಾನ್ಯತೆರಹಿತ ಪಕ್ಷಗಳಿಂದ 19, 128 ಪಕ್ಷೇತರರು ಸೇರಿದಂತೆ 242 ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ ರಾಷ್ಟ್ರೀಯ ಪಕ್ಷಗಳ 32, ರಾಜ್ಯ ಪಕ್ಷಗಳ 4, ಮಾನ್ಯತೆರಹಿತ ಪಕ್ಷಗಳ 18 ಹಾಗೂ 126 ಪಕ್ಷೇತರರು ಸೇರಿದಂತೆ 180 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, 27ರಲ್ಲಿ ಜಯಸಾಧಿಸಿ, ಶೇ.48.90ರಷ್ಟು ಮತಪಡೆದುಕೊಂಡಿತ್ತು. ಜನತಾದಳ 27ರಲ್ಲಿ ಸ್ಪರ್ಧಿಸಿ ಕೇವಲ ಒಂದರಲ್ಲಿ ಜಯಸಾಧಿಸಿ, ಮೂರರಲ್ಲಿ ಠೇವಣಿ ಕಳೆದುಕೊಂಡು ಶೇ.28.34ರಷ್ಟು ಮತಗಳಿಸಿತ್ತು. ಜನತಾಪಕ್ಷ 26ರಲ್ಲಿ ಸ್ಪರ್ಧಿಸಿ 21ರಲ್ಲಿ ಠೇವಣಿ ಇಲ್ಲವಾಗಿಸಿಕೊಂಡಿತು. ಕರ್ನಾಟಕ ರಾಜ್ಯ ರೈತ ಸಂಘ 10ರಲ್ಲಿ ಸ್ಪರ್ಧಿಸಿ 10ರಲ್ಲೂ ಠೇವಣಿ ನಷ್ಟ ಮಾಡಿಕೊಂಡಿತ್ತು. ಕೊಪ್ಪಳ ಕ್ಷೇತ್ರದಲ್ಲಿ ಜನತಾದಳದ ಬಸವರಾಜ ಪಾಟೀಲ್ ಅವರು ಕಾಂಗ್ರೆಸ್ನ ಎಚ್.ಜಿ. ರಾಮುಲು ಅವರನ್ನು 23088 ಮತಗಳಿಂದ ಮಣಿಸಿದ್ದರು.
ಕಾಂಗ್ರೆಸ್ನ 14 ಅಭ್ಯರ್ಥಿಗಳು ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸಿದ್ದರು. ಗುಲ್ಬರ್ಗದಿಂದ ಬಿ.ಜಿ. ಜವಳಿ (1,08,838), ಚಿತ್ರದುರ್ಗದಿಂದ ಸಿ.ಪಿ. ಮೂಡಲಗಿರಿಯಪ್ಪ (1,42,193), ತುಮಕೂರಿನಿಂದ ಜಿ.ಎಸ್. ಬಸವರಾಜ್ (1,99,138), ಚಿಕ್ಕಬಳ್ಳಾಪುರದಿಂದ ವಿ. ಕೃಷ್ಣರಾವ್ (1,36,888), ಕೋಲಾರದಿಂದ (ಎಸ್ಸಿ) ವೈ. ರಾಮಕೃಷ್ಣ (1,32,602), ಕನಕಪುರದಿಂದ ಎಂ.ವಿ. ಚಂದ್ರಶೇಖರ ಮೂರ್ತಿ (2,55,221), ಬೆಂಗಳೂರು ಉತ್ತರದಿಂದ ಸಿ.ಕೆ. ಜಾಫರ್ ಷರೀಫ್ (1,07,124), ಬೆಂಗಳೂರು ದಕ್ಷಿಣದಿಂದ ಆರ್. ಗುಂಡೂರಾವ್ (2,39,854), ಚಾಮರಾಜನಗರದಿಂದ (ಎಸ್ಸಿ) ವಿ. ಶ್ರೀನಿವಾಸಪ್ರಸಾದ್ (1,53,645), ಮೈಸೂರಿನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (2,49,364), ಉಡುಪಿಯಿಂದ ಆಸ್ಕರ್ ಫರ್ನಾಂಡೀಸ್ (1,52,193), ಹಾಸನದಿಂದ ಎಚ್.ಸಿ. ಶ್ರೀಕಂಠಯ್ಯ (1,89,155), ಚಿಕ್ಕಮಗಳೂರಿನಿಂದ ಡಿ.ಎಂ. ಪುಟ್ಟೇಗೌಡ (1,61,357), ಶಿವಮೊಗ್ಗದಿಂದ ಟಿ.ವಿ. ಚಂದ್ರಶೇಖರಪ್ಪ (1,40,370), ಬಿಜಾಪುರದಿಂದ ಬಸವನಗೊಂಡಪ್ಪ ಕಡಪ್ಪ (1,23,333) ಲಕ್ಷಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಿದ್ದರು. ಇವರಲ್ಲದೆ, ಬೀದರ್ನಿಂದ (ಎಸ್ಸಿ) ನರಸಿಂಗರಾವ್ ಸೂರ್ಯವಂಶಿ, ರಾಯಚೂರಿನಿಂದ ಅಂಬಣ್ಣ ದೊರೆ ನಾಯ್ಕ, ಬಳ್ಳಾರಿಯಿಂದ ಬಸವರಾಜೇಶ್ವರಿ, ದಾವಣಗೆರೆಯಿಂದ ಚನ್ನಯ್ಯ ಒಡೆಯರ್, ಮಂಡ್ಯದಿಂದ ಜಿ. ಮಾದೇಗೌಡ, ಮಂಗಳೂರಿನಿಂದ ಜನಾರ್ದನಪೂಜಾರಿ, ಕೆನರಾದಿಂದ ದೇವರಾಯ್ ನಾಯ್ಕ, ಧಾರವಾಡ ಉತ್ತರದಿಂದ ಡಿ.ಕೆ. ನಾಯ್ಕರ್, ಬೆಳಗಾವಿಯಿಂದ ಷಣ್ಮುಖಪ್ಪ ಬಸಪ್ಪ ಸಿದ್ನಾಳ್, ಚಿಕ್ಕೋಡಿಯಿಂದ (ಎಸ್ಸಿ) ಬಿ. ಶಂಕರಾನಂದ, ಬಾಗಲಕೋಟೆಯಿಂದ ಸುಭಾಷ್ ತಮ್ಮಣ್ಣಪ್ಪ ಪಾಟೀಲ್ ಕಾಂಗ್ರೆಸ್ನಿಂದ ಜಯಸಾಧಿಸಿದ್ದರು.
ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ನ ಎಂ.ವಿ. ಚಂದ್ರಶೇಖರ ಮೂರ್ತಿ 4,72,265 ಮತಗಳನ್ನು ಪಡೆದದ್ದು ಈವರೆಗಿನ ಒಂಬತ್ತು ಚುನಾವಣೆಗಳಲ್ಲೇ ಅತ್ಯಂತ ಗರಿಷ್ಠವಾಗಿತ್ತು. ಅಷ್ಟೇ ಅಲ್ಲ, ಅವರು ಜನತಾದಳದ ಸಿ. ನಾರಾಯಣಸ್ವಾಮಿ ಅವರನ್ನು 2,55,221 ಮತಗಳ ಅಂತರದಿಂದ ಮಣಿಸಿದ್ದೂ ಭಾರಿ ಅಂತರವಾಗಿ ಹೊಸ ದಾಖಲೆ ಬರೆದರು. ಬೆಂಗಳೂರು ದಕ್ಷಿಣದಿಂದ ಆರ್. ಗುಂಡೂರಾವ್ 4,13,574 ಮತಗಳನ್ನು ಪಡೆದು, ಜನತಾದಳದ ಎಂ. ರಘುಪತಿ ಅವರನ್ನು 2,39,854 ಮತಗಳಿಂದ ಮಣಿಸಿದ್ದರು. ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು 2,49,364 ಮತಗಳಿಂದ ಜನತಾಪಕ್ಷದ ಮಂದೇಗೌಡ ಅವರನ್ನು ಮಣಿಸಿದ್ದರು. ಈ ಮೂರು ಅಭ್ಯರ್ಥಿಗಳು ಅತಿ ಹೆಚ್ಚಿನ ಅಂತರದಲ್ಲಿ ಗೆಲವು ದಾಖಲಿಸಿದ್ದು ಈ ಚುನಾವಣೆಯ ವಿಶೇಷ.
- ಕೆರೆ ಮಂಜು