ಸ್ವಾರಸ್ಯ

ಬಹುಮತ ದೊರಕಿಸದ ಅನುಕಂಪ ನರಸಿಂಹ ರಾವ್‌ರಿಗೆ ಪ್ರಧಾನಿ ಪಟ್ಟ

ಜನತಾದಳದೊಳಗಿನ ಕಚ್ಚಾಟ, ವಿಭಜನೆಯಿಂದ ಒಂಬತ್ತನೇ ಲೋಕಸಭೆ ಕೇವಲ 16...

ಜನತಾದಳದೊಳಗಿನ ಕಚ್ಚಾಟ, ವಿಭಜನೆಯಿಂದ ಒಂಬತ್ತನೇ ಲೋಕಸಭೆ ಕೇವಲ 16 ತಿಂಗಳಲ್ಲಿ ಅಂತ್ಯ ಕಂಡಿತ್ತು. 1989ರಲ್ಲಿ ಒಂಬತ್ತನೇ ಲೋಕಸಭೆ ಚುನಾವಣೆ ನಡೆದಿತ್ತಾದರೂ, ಇಬ್ಬರು ಪ್ರಧಾನಿಗಳನ್ನು ಕಂಡ ಸರ್ಕಾರ ಉರುಳಿಬಿದ್ದ ಮೇಲೆ 1991ರ ಏಪ್ರಿಲ್-ಮೇ ತಿಂಗಳಲ್ಲಿ ಹತ್ತನೇ ಲೋಕಸಭೆ ಚುನಾವಣೆ ನಡೆಯಿತು. ರಾಜೀವ್‌ಗಾಂಧಿ ನೇತೃತ್ವದ ಸರ್ಕಾರದ ಕಳಂಕದಿಂದ ಒಂಬತ್ತನೇ ಲೋಕಸಭೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್, ರಾಜೀವ್‌ಗಾಂಧಿ ಹತ್ಯೆ ಆಧಾರದಲ್ಲಿ ಹತ್ತನೇ ಲೋಕಸಭೆಯಲ್ಲಿ ಅಲ್ಪಮತವಿದ್ದರೂ ಅಧಿಕಾರ ಗದ್ದುಗೆಯಲ್ಲಿ ಐದು ವರ್ಷ ಆಳ್ವಿಕೆ ನಡೆಸುವಲ್ಲಿ ಶಕ್ತವಾಯಿತು. 1991ರ ಮೇ 21ರಂದು ರಾಜೀವ್ ಗಾಂಧಿ ಹತ್ಯೆ ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಾಯಿತು. ಈ ವೇಳೆಗಾಗಲೇ 211 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನವಾಗಿತ್ತು. ಇದಾದ ನಂತರ ಚುನಾವಣೆಯಲ್ಲಿ ಜೂನ್ 12-15ರಂದು ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಿತು. ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಪಡೆದಿರಲಿಲ್ಲ. ರಾಜೀವ್‌ಗಾಂಧಿ ಹತ್ಯೆ ನಂತರದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನುಕಂಪದ ಮತಗಳನ್ನು ಪಡೆಯಿತು. ಆದರೂ ಸಂಪೂರ್ಣ ಬಹುಮತ ಗಳಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು.
ರಾಜೀವ್ ಹತ್ಯೆಯಿಂದ ಹತ್ತನೇ ಲೋಕಸಭೆ ಚುನಾವಣೆ ಸ್ವಲ್ಪ ದೀರ್ಘವಾಗಿ ನಡೆಯಿತು. ಪಂಜಾಬ್ ಹಾಗೂ ಇತರೆ ಕ್ಷೇತ್ರಗಳಲ್ಲಿ ಕೆಲವು ಗೊಂದಲದಿಂದ 543ಕ್ಕೆ ಬದಲಾಗಿ 521 ಕ್ಷೇತ್ರಗಳಿಗೆ ಚುನಾವಣೆ ಈ ಸಂದರ್ಭದಲ್ಲಿ ನಡೆಯಿತು. 26,18,32,499 ಪುರುಷರು ಹಾಗೂ 23,65,31,302 ಮಹಿಳೆಯರು ಸೇರಿದಂತೆ 49,83,63,801 ಮತದಾರರಿದ್ದರು. ಇವರಲ್ಲಿ 28,27,00,942 ಮತದಾರರು ಹಕ್ಕು ಚಲಾಯಿಸುವ ಮೂಲಕ ಶೇ.56.73ರಷ್ಟು ಮತದಾನ ದಾಖಲಿಸಿದರು. ಇದರಲ್ಲಿ ಶೇ.2.43ರಷ್ಟು ಮತ ಕುಲಗೆಟ್ಟಿದ್ದವು. 521 ಕ್ಷೇತ್ರಗಳಲ್ಲಿ 76 ಎಸ್‌ಸಿ ಹಾಗೂ 41 ಎಸ್‌ಟಿಗೆ ಮೀಸಲಾಗಿದ್ದವು. ರಾಷ್ಟ್ರೀಯ ಪಕ್ಷಗಳಿಂದ 1822, ರಾಜ್ಯ ಪಕ್ಷಗಳಿಂದ 490, ಮಾನ್ಯತೆರಹಿತ ಪಕ್ಷಗಳಿಂದ 842 ಹಾಗೂ 5514 ಪಕ್ಷೇತರರು ಸೇರಿದಂತೆ ಒಟ್ಟು 8668 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಇವರಲ್ಲಿ ರಾಷ್ಟ್ರೀಯ ಪಕ್ಷಗಳಿಂದ 828, ರಾಜ್ಯ ಪಕ್ಷಗಳಿಂದ 340, ಮಾನ್ಯತೆರಹಿತ ಪಕ್ಷಗಳಿಂದ 821 ಹಾಗೂ 5497 ಪಕ್ಷೇತರರು ಸೇರಿದಂತೆ 7486 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರು. 326 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದರು. ಇವರಲ್ಲಿ 37 ಮಂದಿ ವಿಜಯಮಾಲೆ ಧರಿಸಿದರೆ, 249 ಮಂದಿಯ ಠೇವಣಿಯೂ ವಾಪಸ್ ಬರಲಿಲ್ಲ.
ಕಾಂಗ್ರೆಸ್ 487 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 232 ಸ್ಥಾನಗಳನ್ನು ಗೆದ್ದು, 60ರಲ್ಲಿ ಠೇವಣಿ ಕಳೆದುಕೊಂಡಿತ್ತು. ಶೇ.36.26ರಷ್ಟು ಮತಪಡೆದಿತ್ತು. ಬಿಜೆಪಿ 468ರಲ್ಲಿ ಸ್ಪರ್ಧಿಸಿ 120ರಲ್ಲಿ ಜಯಸಾಧಿಸಿ, 185ರಲ್ಲಿ ಠೇವಣಿ ನಷ್ಟಮಾಡಿಕೊಂಡು, ಶೇ.20.11ರಷ್ಟು ಮತಗಳಿಸಿತ್ತು. ಸಿಪಿಐ 42ರಲ್ಲಿ 14, ಸಿಪಿಎಂ 60ರಲ್ಲಿ 35ರಲ್ಲಿ ಗೆಲವು ಕಂಡಿತ್ತು. ಜನತಾದಳ 308ರಲ್ಲಿ ಸ್ಪರ್ಧಿಸಿ 59ರಲ್ಲಿ ಗೆದ್ದು 146ರಲ್ಲಿ ಠೇವಣಿ ಕಳೆದುಕೊಂಡಿತ್ತು. ಐಸಿಎಸ್ (ಇಂಡಿಯನ್ ಕಾಂಗ್ರೆಸ್) 28ರಲ್ಲಿ ಕಣಕ್ಕಿಳಿದು, ಒಂದರಲ್ಲಿ ಗೆದ್ದು 25ರಲ್ಲಿ ಠೇವಣಿ ಉಳಿಸಿಕೊಳ್ಳಲಿಲ್ಲ. ಜನತಾಪಕ್ಷ 349ರಲ್ಲಿ ಕೇವಲ 5ರಲ್ಲಿ ಜಯಸಾಧಿಸಿ, 309ರಲ್ಲಿ ಠೇವಣಿ ಕಳೆದುಕೊಂಡಿತ್ತು. ಲೋಕದಳ ಸ್ಪರ್ಧಿಸಿದ್ದ 78ರಲ್ಲೂ ಠೇವಣಿ ನಷ್ಟವಾಯಿತು. ಜನತಾದಳ(ಎಸ್) 2ರಲ್ಲಿ ಸ್ಪರ್ಧಿಸಿ ಅಷ್ಟರಲ್ಲೂ ಠೇವಣಿ ಕಳೆದುಕೊಂಡಿತು. ರಾಜ್ಯ ಪಕ್ಷಗಳು 490ರಲ್ಲಿ 50ರಲ್ಲಿ ಗೆದ್ದು, 340ರಲ್ಲಿ ಠೇವಣಿ ಕಳೆದುಕೊಂಡರೆ, ಮಾನ್ಯತೆರಹಿತ ಪಕ್ಷಗಳ 842 ಅಭ್ಯರ್ಥಿಗಳಲ್ಲಿ ನಾಲ್ವರು ಗೆದ್ದು, 821 ಮಂದಿ ಠೇವಣಿ ಕಳೆದುಕೊಂಡರು. 5514 ಪಕ್ಷೇತರರಲ್ಲಿ ಕೇವಲ ಒಬ್ಬರು ಮಾತ್ರ ಗೆಲವು ಕಂಡರು.
ಲೋಕಸಭೆಯಲ್ಲಿ ಬಹುಮತ ಸಾಬೀತಿಗೆ 273 ಸ್ಥಾನಗಳ ಅಗತ್ಯವಿದ್ದರೂ, 232 ಸ್ಥಾನ ಗೆದ್ದ ಕಾಂಗ್ರೆಸ್, ಎಡಪಕ್ಷಗಳ ಬಾಹ್ಯ ಬೆಂಬಲದೊಂದಿಗೆ ಅಲ್ಪಮತದ ಸರ್ಕಾರವಾಗಿ ಐದು ವರ್ಷಗಳ ಅಧಿಕಾರ ಪೂರೈಸಿತು. ವ್ಯಕ್ತಿಯಾಗಿ ಒಂಬತ್ತನೇ ಹಾಗೂ ಅವಧಿಯಲ್ಲಿ 15ನೆಯವರಾಗಿ ಪಿ.ವಿ. ನರಸಿಂಹರಾವ್ 1991ರ ಜೂನ್ 21ರಂದು ಅಧಿಕಾರ ಹಿಡಿದರು. ಶಿವರಾಜ್‌ಪಾಟೀಲ್ ಸ್ಪೀಕರ್ ಆಗಿದ್ದರು. ರಾಜ್ಯದ ತುಮಕೂರಿನಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದ ಎಸ್. ಮಲ್ಲಿಕಾರ್ಜುನಯ್ಯ ಉಪ ಸ್ಪೀಕರ್ ಆಗಿದ್ದರು.

- ಕೆರೆ ಮಂಜು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ನ ಮುಂದಿನ ಸರ್ವೋಚ್ಚ ನಾಯಕ ಯಾರೇ ಆದರೂ ಅವರನ್ನು ಹತ್ಯೆ ಮಾಡ್ತೀವಿ: ಇಸ್ರೇಲ್ ಬೆದರಿಕೆ

Iran war: ಅಲಿ ಖಮೇನಿ ಪುತ್ರ ಮೊಜ್ತಾಬಾ ಖಮೇನಿ ಇರಾನ್ ನೂತನ ಪರಮೋಚ್ಛ ನಾಯಕರಾಗಿ ಆಯ್ಕೆ

ರೋಚಕ ಎನಿಸುವ ಇರಾನ್ ಸಮರಾಂಗಣದ ವಿಶ್ಲೇಷಣೆಗಳ ಅಸಲಿಯತ್ತೇನು? (ತೆರೆದ ಕಿಟಕಿ)

US-Israel Iran War: ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದೇ ಆದರೆ, ರಾಜ್ಯದ ಆರ್ಥಿಕತೆ ಮೇಲೆ ಭಾರೀ ಹೊಡೆತ..!

Israel Iran war: ಭಾರತಕ್ಕೆ ಬಿಗ್ ಶಾಕ್, ಕತಾರ್ ನಿಂದ ಕೈಗಾರಿಕೆಗಳಿಗೆ ಅನಿಲ ಸರಬರಾಜು ಕಡಿತ!

SCROLL FOR NEXT