ರಾಜೀವ್‌ಗಾಂಧಿ ಅನುಕಂಪದಿಂದ ಅಧಿಕಾರ ಹಿಡಿದಿದ್ದ ಕಾಂಗ್ರೆಸ್, 11ನೇ ಲೋಕಸಭೆ ಚುನಾವಣೆಯಲ್ಲಿ ತೀರಾ ಹೀನಾಯ ಅಂದರೆ ಈ ಹಿಂದೆಂದೂ ಕಾಣದಂತಹ ಸೋಲು ಅನುಭವಿಸಿತು. ನೆಹರೂ ಮನೆತನ ನಾಯಕತ್ವದ ಕಳೆದುಕೊಂಡ ಕಾಂಗ್ರೆಸ್ ಪ್ರಥಮ ಬಾರಿಗೆ ಅತ್ಯಂತ ಕಡಿಮೆ ಸ್ಥಾನಗಳನ್ನು ಗಳಿಸಿತು. ಬಿಜೆಪಿ ಅತಿಹೆಚ್ಚಿನ ಸ್ಥಾನಗಳಲ್ಲಿ ಪ್ರಥಮಬಾರಿಗೆ ಗೆಲವು ಸಾಧಿಸಿದರೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದರೂ ಬಹುಮತವಿಲ್ಲದೆ ಕೇವಲ 13 ದಿನಕ್ಕೆ ರಾಜಿನಾಮೆ ನೀಡಿದರು. ಈ ಪ್ರಕ್ರಿಯೆಯಿಂದ ಜನತಾದಳ ಸೇರಿದಂತೆ 'ಯುನೈಟೆಡ್ ಫ್ರಂಟ್' ರಚನೆಯಾಗಿ, ಕನ್ನಡಿಗ ಎಚ್.ಡಿ. ದೇವೇಗೌಡ ಪ್ರಧಾನಿಯಾದರು. ಹತ್ತು ತಿಂಗಳ ಬಳಿಕೆ ಐ.ಕೆ. ಗುಜ್ರಾಲ್ ಪ್ರಧಾನಿಯಾದರು. ಮೂವರು ಪ್ರಧಾನಿಗಳನ್ನು ಕಂಡ ಈ ಲೋಕಸಭೆ ಪೂರ್ಣ ಅವಧಿಯನ್ನು ಪೂರೈಸಲಿಲ್ಲ. ಎರಡು ವರ್ಷಕ್ಕೇ ತನ್ನ ಅಸ್ತಿತ್ವ ಕಳೆದುಕೊಂಡಿತ್ತು.
11ನೇ ಲೋಕಸಭೆಗೆ 1996ರ ಏಪ್ರಿಲ್ 27, ಮೇ 2 ಮತ್ತು 7ರಂದು ಚುನಾವಣೆ ನಡೆಯಿತು. ಪ್ರಥಮ ಬಾರಿಗೆ ಮತದಾರರ ಸಂಖ್ಯೆ 50 ಕೋಟಿ ದಾಟಿತ್ತು. 30,98,15,776 ಪುರುಷರು, 28,27,56,512 ಮಹಿಳೆಯರು ಸೇರಿದಂತೆ 59,25,72,288 ಮತದಾರರಿದ್ದರು. 34,33,08,090 ಮತದಾರರು ಹಕ್ಕು ಚಲಾಯಿಸಿ ಶೇ.57.94ರಷ್ಟು ಮತ ದಾಖಲಿಸಿದ್ದರು. ಶೇ.2.44 ಮತಗಳು ಕುಲಗೆಟ್ಟಿದ್ದವು. 7,67,462 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. ಎಂಟು ರಾಷ್ಟ್ರೀಯ ಪಕ್ಷಗಳು, 32 ರಾಜ್ಯ ಪಕ್ಷಗಳು, 171 ಮಾನ್ಯತೆರಹಿತ ಪಕ್ಷಗಳು ಕಣದಲ್ಲಿದ್ದವು. 543 ಸ್ಥಾನಗಳಿಗೆ ರಾಷ್ಟ್ರೀಯ ಪಕ್ಷಗಳ 1817, ರಾಜ್ಯ ಪಕ್ಷಗಳ 761, ಮಾನ್ಯತೆರಹಿತ ಪಕ್ಷಗಳ 738 ಹಾಗೂ 10,636 ಪಕ್ಷೇತರರು ಸೇರಿದಂತೆ ದಾಖಲೆಯ 13,952 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ, ರಾಷ್ಟ್ರೀಯ ಪಕ್ಷಗಳ 897, ರಾಜ್ಯ ಪಕ್ಷಗಳ 469, ಮಾನ್ಯತೆರಹಿತ ಪಕ್ಷಗಳ 718 ಹಾಗೂ 10,604 ಪಕ್ಷೇತರರು ಸೇರಿದಂತೆ 12,688 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 599 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿ, 40 ಮಂದಿ ಗೆಲವು ಸಾಧಿಸಿದರೆ 518 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.
ಬಿಜೆಪಿ 471ರಲ್ಲಿ ಸ್ಪರ್ಧಿಸಿ 161 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಕಾಂಗ್ರೆಸ್ ಅನ್ನು ಹಿಂದಿಕ್ಕಿತ್ತು. ಬಿಜೆಪಿ 20.29ರಷ್ಟು ಮತ ಗಳಿಸಿತ್ತು. ಕಾಂಗ್ರೆಸ್ 529 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 140ರಲ್ಲಿ ಗೆಲವು ಸಾಧಿಸಿ, 127ರಲ್ಲಿ ಠೇವಣಿ ಇಲ್ಲದಂತೆ ಮಾಡಿಕೊಂಡರೂ ಶೇ. 28.80ರಷ್ಟು ಮತಗಳಿಸಿತ್ತು. ಒಂದು ಪಕ್ಷ ಅತಿ ಕಡಿಮೆ ಮತ ಗಳಿಸಿದ ಚುನಾವಣೆ ಇದಾಗಿ ದಾಖಲಾಯಿತು. ಜನತಾದಳ 196ರಲ್ಲಿ ಸ್ಪರ್ಧಿಸಿ 46ರಲ್ಲಿ ಗೆದ್ದು, 85ರಲ್ಲಿ ಠೇವಣಿ ನಷ್ಟಮಾಡಿಕೊಂಡಿತ್ತು. ಸಿಪಿಎಂ 75ರಲ್ಲಿ 32, ಸಿಪಿಐ 43ರಲ್ಲಿ 12 ಜಯ ಸಾಧಿಸಿತ್ತು. ತಿವಾರಿ ಇಂದಿರಾ ಕಾಂಗ್ರೆಸ್ 321ರಲ್ಲಿ ಸ್ಪರ್ಧಿಸಿ 4ರಲ್ಲಿ ಗೆದ್ದು, 310ರಲ್ಲಿ ಠೇವಣಿ ವಾಪಸ್ ಪಡೆಯಲಿಲ್ಲ. ಸಮತಾಪಕ್ಷ 81ರಲ್ಲಿ ಸ್ಪರ್ಧಿಸಿ 8ರಲ್ಲಿ ಗೆದ್ದು, 51ರಲ್ಲಿ ಠೇವಣಿ ಕಳೆದುಕೊಂಡಿತ್ತು. ಜನತಾಪಕ್ಷ 101ರಲ್ಲಿ ಸ್ಪರ್ಧಿಸಿ ಒಂದರಲ್ಲೂ ಗೆಲ್ಲದೆ 100ರಲ್ಲಿ ಠೇವಣಿ ಕಳೆದುಕೊಂಡಿದ್ದು ವಿಶೇಷ. ರಾಜ್ಯ ಪಕ್ಷಗಳು 129, ಮಾನ್ಯತೆರಹಿತ ಪಕ್ಷಗಳು 2 ಸ್ಥಾನ ಪಡೆದರೆ, 9 ಪಕ್ಷೇತರರು ಜಯಸಾಧಿಸಿದರು.
ಬಿಜೆಪಿ ಅತ್ಯಂತ ಹೆಚ್ಚಿನ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಅಂದಿನ ರಾಷ್ಟ್ರಪತಿ ಶಂಕರ್‌ದಯಾಳ್ ಶರ್ಮಾ ಅವರು ವಾಜಪೇಯಿ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಿದರು. ಇದಕ್ಕೆ ಸಮ್ಮತಿಸಿ, ಮೈತ್ರಿಕೂಟ ರಚಿಸಿಕೊಳ್ಳುವ ವಿಶ್ವಾಸದೊಂದಿಗೆ ವಾಜಪೇಯಿ ಅವರು ವ್ಯಕ್ತಿಯಾಗಿ 10 ಹಾಗೂ ಅವಧಿಯಲ್ಲಿ 16ನೇ ಪ್ರಧಾನಿಯಾಗಿ 1996ರ ಮೇ 16ರಂದು ಪ್ರಮಾಣವಚನ ಸ್ವೀಕರಿಸಿದರು. ಶಿವಸೇನೆ, ಸಮತಾಪಕ್ಷ, ಹರ್ಯಾಣ ವಿಕಾಸ ಪಕ್ಷ ಸೇರಿಕೊಂಡರೂ 187 ಸ್ಥಾನಗಳಷ್ಟೇ ಆದವು. ಹೀಗಾಗಿ, ಬಹುಮತ ಸಾಬೀತಿಗೆ ಮುಂದಾಗದೆ 13 ದಿನಕ್ಕೇ ವಾಜಪೇಯಿ ರಾಜಿನಾಮೆ ನೀಡಿದರು. ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಸರ್ಕಾರ ರಚಿಸಲು ನಿರಾಕರಿಸಿತು. ಈ ಸಂದರ್ಭವನ್ನು ಬಳಸಿಕೊಂಡ ಜನತಾದಳ 'ಯುನೈಟೆಡ್ ಫ್ರಂಟ್' ರಚಿಸಿತು. ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ದೇವೇಗೌಡ ಅವರನ್ನು ಪ್ರಧಾನಿಯನ್ನಾಗಿ ಈ ಒಕ್ಕೂಟ ನೇಮಕ ಮಾಡಿತು. ಪ್ರಥಮಬಾರಿಗೆ ಕನ್ನಡಿಗ ಪ್ರಧಾನಿಯಾಗಿ ದೇವೇಗೌಡ ಜೂನ್ 1ರಂದು ಪ್ರಮಾಣ ಸ್ವೀಕರಿಸಿದರು.
ದೇವೇಗೌಡ ಅವರೊಂದಿಗೆ ಕಾಂಗ್ರೆಸ್‌ಗೆ ಹೊಂದಾಣಿಕೆ ಆಗಲಿಲ್ಲ. ಅದಕ್ಕೇ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿತು. ಇದರಿಂದ ದೇವೇಗೌಡ 10 ತಿಂಗಳಿಗೇ ರಾಜಿನಾಮೆ ನೀಡಬೇಕಾಯಿತು. ಚುನಾವಣೆಗೆ ಮುಂದಾಗದ ಕಾಂಗ್ರೆಸ್ ಮತ್ತೆ ಈ ಒಕ್ಕೂಟದ ಮತ್ತೊಬ್ಬ ನಾಯಕರಿಗೆ ಬೆಂಬಲ ನೀಡುವುದಾಗಿ ಹೇಳಿತು. ಹೀಗಾಗಿ ಐ.ಕೆ. ಗುಜ್ರಾಲ್ 1997ರ ಏಪ್ರಿಲ್ 21 ಪ್ರಧಾನಿಯಾದರು. ಆದರೆ, ಜನತಾದಳದೊಳಗಿನ ಬಿಕ್ಕಟ್ಟು ಅವರನ್ನು ಹೆಚ್ಚು ದಿನ ಪ್ರಧಾನಿಯನ್ನಾಗಿಸಲಿಲ್ಲ. ಲಾಲೂಪ್ರಸಾದ್ ಯಾದವ್‌ರ ಮೇವು ಹಗರಣ ಜನತಾದಳವನ್ನು ಒಡೆಯಿತು. ಕೇವಲ 8 ತಿಂಗಳಿಗೇ ಅಧಿಕಾರ ಇಲ್ಲದಂತಾಯಿತು. '12ನೇ ಲೋಕಸಭೆ ಚುನಾವಣೆ ಮುಗಿಯುವವರೆಗೂ ಐ.ಕೆ. ಗುಜ್ರಾಲ್ ಕೇರ್ ಟೇಕರ್ ಪ್ರಧಾನಿಯಾಗಿ'ದ್ದರು.
-ಕೆರೆ ಮಂಜು